ಮಣಿಪುರ: ಮೂವರು ಬಂಡುಕೋರರು, ಶಸ್ತ್ರಾಸ್ತ್ರ ವ್ಯಾಪಾರಿಯ ಬಂಧನ

Photo Credit: (X/@manipur_police
ಇಂಫಾಲ, ಸೆ. 21: ವಿವಿಧ ನಿಷೇಧಿತ ಸಂಘಟನೆಗಳ ಮೂವರು ಬಂಡುಕೋರರು ಹಾಗೂ ಶಸ್ತ್ರಾಸ್ತ್ರ ಮಾರಾಟಗಾರರೊಬ್ಬರನ್ನು ಮಣಿಪುರದಿಂದ ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ನಿಷೇಧಿತ ಪಿಆರ್ಪಿಎಕೆ ಸಂಘಟನೆಗೆ ಸೇರಿದ ಇಬ್ಬರು ಬಂಡುಕೋರರನ್ನು ಬಿಷ್ಣುಪರ ಜಿಲ್ಲೆಯ ಟ್ರೋಂಗ್ಲಾವೋಬಿಯಿಂದ ಶುಕ್ರವಾರ ಬಂಧಿಸಲಾಯಿತು.
ಬಂಧಿತ ಬಂಡುಕೋರರನ್ನು ಥೊಕ್ಚೋಮ್ ಮನಿಮಾಟುಮ್ ಸಿಂಗ್ (20) ಹಾಗೂ ಲೈಶ್ರಾಮ್ ಪ್ರೇಮ್ಸಾಗರ್ ಸಿಂಗ್ (24) ಎಂದು ಗುರುತಿಸಲಾಗಿದೆ. ಇವರು ಸಾರ್ವಜನಿಕರು, ಸ್ಥಳೀಯ ಉದ್ಯಮಿಗಳು ಹಾಗೂ ಶಾಲೆಗಳಿಂದ ಸುಲಿಗೆ ಮಾಡುವುದರಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ನಿಷೇಧಿತ ಸಂಘಟನೆ ಪೀಪಲ್ಸ್ ಲಿಬರೇಷನ್ ಆರ್ಮಿಯ ಸದಸ್ಯನೋರ್ವನನ್ನು ಇಂಫಾಲ್ ಪೂರ್ವ ಜಿಲ್ಲೆಯ ಕೊಂಗ್ಬಾದಿಂದ ಬಂಧಿಸಲಾಗಿದೆ. ಈತನನ್ನು ಅಧಿಕಾರಿಮಯೂಮ್ ರಾಮ್ಕುಮಾರ್ ಶರ್ಮಾ (62) ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಶಸ್ತ್ರಾಸ್ತ್ರ ವ್ಯಾಪಾರಿಯೊಬ್ಬರನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಯುರೆಂಬಮ್ನಲ್ಲಿರುವ ಆತನ ಮನೆಯ ಸಮೀಪದಿಂದ ಶುಕ್ರವಾರ ಬಂಧಿಸಲಾಗಿದೆ. ಆತನನ್ನು ಫಿಜಾಮ್ ಚೇತನ್ಜಿ ಸಿಂಗ್ ಎಂದು ಗುರುತಿಸಲಾಗಿದೆ. ಆತನ ವಶದಲ್ಲಿದ್ದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.







