ಮೂರು ದೇಶಗಳಿಗೆ ಪ್ರವಾಸ; ಗಡಿ ಹೊರಗಿನ ಭಯೋತ್ಪಾದನೆಯ ವಿರುದ್ಧ ಬೆಂಬಲ ಸೂಚಿಸಿದ ಮಿತ್ರ ರಾಷ್ಟ್ರಗಳಿಗೆ ಧನ್ಯವಾದ ಸಲ್ಲಿಸುವ ಅವಕಾಶ: ಪ್ರಧಾನಿ ಮೋದಿ

Credit: PMO Photo
ಹೊಸದಿಲ್ಲಿ: ಕೆನಡಾದಲ್ಲಿ ಆಯೋಜನೆಗೊಂಡಿರುವ ಜಿ-7 ಶೃಂಗಸಭೆಯು ಗಂಭೀರ ಜಾಗತಿಕ ಸಮಸ್ಯೆಗಳು ಹಾಗೂ ದಕ್ಷಿಣ ಜಗತ್ತಿನ ಆದ್ಯತೆಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶ ಒದಗಿಸಲಿದೆ ಎಂದು ರವಿವಾರ ಮೂರು ದೇಶಗಳ ಪ್ರವಾಸಕ್ಕಾಗಿ ವಿಮಾನ ನಿಲ್ದಾಣದಿಂದ ತೆರಳುವುದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
"ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆಯ ಆಮಂತ್ರಣದ ಮೇಲೆ ಕನಾನಸ್ಕಿಸ್ ನಲ್ಲಿ ಆಯೋಜನೆಗೊಂಡಿರುವ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕೆನಡಾಕ್ಕೆ ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ, " ನಮ್ಮ ಮಿತ್ರ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸಲು ಎದುರು ನೋಡುತ್ತಿದ್ದೇನೆ" ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮೂರು ದೇಶಗಳ ಪ್ರವಾಸವು ಗಡಿ ಹೊರಗಿನ ಭಯೋತ್ಪಾದನೆ ವಿರುದ್ಧ ಭಾರತಕ್ಕೆ ದೃಢ ಬೆಂಬಲ ಸೂಚಿಸಿದ ಮಿತ್ರ ರಾಷ್ಡ್ರಗಳಿಗೆ ಧನ್ಯವಾದ ಸಲ್ಲಿಸುವ ಅವಕಾಶ ಕೂಡಾ ಆಗಿದ್ದು, ಭಯೋತ್ಪಾದನೆಯನ್ನು ಎಲ್ಲ ವಿಧದಲ್ಲಿ ನಿಭಾಯಿಸಲು ಜಾಗತಿಕ ಮನವರಿಕೆಯನ್ನು ಕ್ರೋಡೀಕರಿಸುವ ಪ್ರಯತ್ನವೂ ಆಗಿದೆ ಎಂದೂ ಅವರು ಹೇಳಿದ್ದಾರೆ.
ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೊಡೌಲಿಡಸ್ ಆಮಂತ್ರಣದ ಮೇರೆಗೆ ಜೂನ್ 15-16ರಂದು ಸೈಪ್ರಸ್ ಗೆ ಭೇಟಿ ನೀಡಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಜಿ-7 ಶೃಂಗಸಭೆಯ ನಂತರ ನಾನು ಕ್ರೊವೇಷಿಯಾಗೆ ಭೇಟಿ ನೀಡಲಿದ್ದು, ಕ್ರೊವೇಷಿಯಾ ಅಧ್ಯಕ್ಷ ಝೋರನ್ ಮಿಲಾನೋವಿಕ್ ಹಾಗೂ ಪ್ರಧಾನಿ ಆ್ಯಂಡ್ರೇಜ್ ಪ್ಲೆಂಕೋವಿಕ್ರೊಂದಿಗೆ ಸಭೆ ನಡೆಸಲಿದ್ದೇನೆ ಎಂದೂ ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.







