ಜಲಂಧರ್ ಸಿವಿಲ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳು ಮೃತ್ಯು: ಆಮ್ಲಜನಕ ಪೂರೈಕೆಯಲ್ಲಿ ದೋಷ; ಆರೋಪ

ಸಾಂದರ್ಭಿಕ ಚಿತ್ರ (Grok)
ಚಂಡೀಗಢ: ಜಲಂಧರ್ ಸಿವಿಲ್ ಆಸ್ಪತ್ರೆಯಲ್ಲಿ ರವಿವಾರ ಸಂಜೆ ಮೂವರು ರೋಗಿಗಳು ಸಾವನ್ನಪ್ಪಿದ ಘಟನೆಗೆ, ತಾಂತ್ರಿಕ ದೋಷದಿಂದಾಗಿ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದೇ ಕಾರಣ ಎಂದು ಮೃತರ ಕುಟುಂಬ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಮೃತರ ಪೈಕಿ, ಒಬ್ಬರು ಹಾವು ಕಡಿತದಿಂದ, ಮತ್ತೊಬ್ಬರು ಔಷಧ ಮಿತಿಮೀರಿದ ಸೇವನೆಯಿಂದ, ಇನ್ನೊಬ್ಬರು ಕ್ಷಯರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೂವರೂ ವೆಂಟಿಲೇಟರ್ ಸಹಾಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ವೈದ್ಯಕೀಯ ಅಧಿಕಾರಿ ಡಾ. ವಿನಯ್ ಆನಂದ್, “ಮುಖ್ಯ ಆಮ್ಲಜನಕ ಸ್ಥಾವರದಲ್ಲಿ ತಾಂತ್ರಿಕ ದೋಷ ಸಂಭವಿಸಿತ್ತು. ಇದರಿಂದ ಆಮ್ಲಜನಕದ ಒತ್ತಡ ಸ್ವಲ್ಪ ಕಡಿಮೆಯಾದರೂ, ತಕ್ಷಣವೇ ಬ್ಯಾಕಪ್ ಸಿಲಿಂಡರ್ಗಳನ್ನು ತಂದು ಪೂರೈಕೆಯನ್ನು ಮುಂದುವರಿಸಲಾಯಿತು. ಮೂಲ ಸ್ಥಾವರದ ದೋಷವನ್ನೂ ಕೂಡ ತ್ವರಿತವಾಗಿ ಸರಿಪಡಿಸಲಾಯಿತು,” ಎಂದು ವಿವರಿಸಿದರು.
“ಸಾವಿಗೆ ನಿಖರ ಕಾರಣಗಳನ್ನು ರೋಗಿಗಳ ವೈದ್ಯಕೀಯ ದಾಖಲೆಗಳಲ್ಲಿ ದಾಖಲಿಸಲಾಗಿದೆ. ಕುಟುಂಬಗಳ ಆರೋಪಗಳನ್ನು ಪರಿಶೀಲಿಸಲಾಗುವುದು,” ಎಂದು ಡಾ. ಆನಂದ್ ಹೇಳಿದ್ದಾರೆ.
ಆದರೆ, ಮೃತರ ಕುಟುಂಬಗಳ ಸದಸ್ಯರು ಆಸ್ಪತ್ರೆಯ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಆರೋಪಿಸಿದ್ದಾರೆ. “ಆಮ್ಲಜನಕದ ಪೂರೈಕೆ ಸ್ಥಗಿತಗೊಂಡ ಬಳಿಕವೇ ರೋಗಿಗಳ ಉಸಿರಾಟ ನಿಂತಿತು", ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜ್ ಕುಮಾರ್ ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಒಂಭತ್ತು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಅದು ಎರಡು ದಿನಗಳಲ್ಲಿ ತನಿಖಾ ವರದಿ ಸಲ್ಲಿಸಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.







