ರಾಯ್ಬರೇಲಿ | ಕಳ್ಳತನದ ಶಂಕೆಯಲ್ಲಿ ದಲಿತ ಯುವಕನ ಹತ್ಯೆ : ಮೂವರು ಪೊಲೀಸರ ಅಮಾನತು

ಹರಿಯೋಮ್ (Photo: newindianexpress.com)
ರಾಯ್ಬರೇಲಿ : ಉತ್ತರಪ್ರದೇಶದ ರಾಯ್ಬರೇಲಿಯಲ್ಲಿ ಕಳ್ಳತನದ ಶಂಕೆಯಲ್ಲಿ ದಲಿತ ಯುವಕನ ಹತ್ಯೆ ಬೆನ್ನಲ್ಲೆ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಘಟನೆ ಹಿನ್ನೆಲೆ ಸಂತ್ರಸ್ತನ ಕುಟುಂಬಸ್ಥರ ಜೊತೆ ರಾಹುಲ್ ಗಾಂಧಿ ಪೋನ್ ಮೂಲಕ ಮಾತುಕತೆ ನಡೆಸಿದ್ದಾರೆ.
ರಾಯ್ಬರೇಲಿಯ ಉಂಚಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಳ್ಳನೆಂದು ಶಂಕಿಸಿ 38 ವರ್ಷದ ದಲಿತ ವ್ಯಕ್ತಿ ಹರಿಯೋಮ್ ಎಂಬವರನ್ನು ಥಳಿಸಿ ಹತ್ಯೆ ಮಾಡಿದ ನಂತರ ರಾಯ್ಬರೇಲಿಯಲ್ಲಿ ಕೋಲಾಹಲ ಭುಗಿಲೆದ್ದಿತ್ತು. ಈ ಪ್ರಕರಣದಲ್ಲಿ ಐವರನ್ನು ಬಂಧಿಸಲಾಗಿದೆ. ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಘಟನೆಯ ವೈರಲ್ ವೀಡಿಯೊದಲ್ಲಿ ಗುಂಪೊಂದು ಸಂತ್ರಸ್ತನನ್ನು ಥಳಿಸುವುದು ಕಂಡು ಬಂದಿದೆ. ಈ ವೇಳೆ ಸಂತ್ರಸ್ತ "ರಾಹುಲ್ ಗಾಂಧಿ" ಸೇರಿದಂತೆ ಕೆಲವು ಪದಗಳನ್ನು ಹೇಳುವುದು, ಆರೋಪಿಗಳು ಹಿಂದಿಯಲ್ಲಿ "ಇಲ್ಲಿರುವ ಎಲ್ಲರೂ ಬಾಬಾ ಜೊತೆಗಿದ್ದಾರೆ” ಎಂದು ಹೇಳುವುದು ವೀಡಿಯೊದಲ್ಲಿ ಸೆರೆಯಾಗಿತ್ತು.
ಘಟನೆ ಕುರಿತು ಮಾಹಿತಿ ಪಡೆದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂತ್ರಸ್ತ ಕುಟುಂಬದ ಜೊತೆ ಮಾತುಕತೆ ನಡೆಸಿದ್ದಾರೆ. ಅವರಿಗೆ ಸಹಾಯ ಮತ್ತು ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
"ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಯ್ ಬರೇಲಿಯಲ್ಲಿ ಅಮಾನವೀಯವಾಗಿ ಹತ್ಯೆಗೀಡಾದ ಯುವಕನ ತಂದೆ ಮತ್ತು ಸಹೋದರನೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಈ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಅವರ ಜೊತೆ ನಿಲ್ಲಲಿದೆ. ದಲಿತ ಸಮುದಾಯದ ವಿರುದ್ಧದ ಇಂತಹ ಕ್ರೌರ್ಯ ಮತ್ತು ದಬ್ಬಾಳಿಕೆಯನ್ನು ಸಹಿಸುವುದು ಅಸಾಧ್ಯ. ಬಾಬಾ ಜನರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.







