ದಿಲ್ಲಿ: ಸಿಬಿಐ ಅಧಿಕಾರಿಗಳ ಸೋಗು ಹಾಕಿ ನಗದು, ಚಿನ್ನಾಭರಣ ದರೋಡೆ

Photo : indian express
ಹೊಸದಿಲ್ಲಿ, ಜು. 20: ಬಾಲಿವುಡ್ ಥ್ರಿಲ್ಲರ್ ಸಿನೆಮಾಗಳಿಂದ ಪ್ರೇರಣೆ ಪಡೆದು ಮೂವರು ಸಿಬಿಐ ಅಧಿಕಾರಿಗಳ ಸೋಗು ಹಾಕಿ ಉದ್ಯಮಿಯೋರ್ವರ ನಿವಾಸದ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಲೂಟಿಗೈದ ಘಟನೆ ಉತ್ತರ ದಿಲ್ಲಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರ ತಂಡಗಳು ಹರಿದ್ವಾರ ಹಾಗೂ ಮುಸ್ಸೋರಿಗೆ ತೆರಳಿ ಒಂದು ವಾರಗಳ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ರಾಜಾ ಬಂಥಿಯಾ ತಿಳಿಸಿದ್ದಾರೆ.
ಆರೋಪಿ 22 ವರ್ಷದ ಮಹಿಳೆ ಸಂತ್ರಸ್ತನ ದೂರದ ಸಂಬಂಧಿಯಾಗಿದ್ದು, ಆಕೆಗೆ ವಝಿರಾಬಾದ್ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ಇರಿಸಿರುವುದು ತಿಳಿದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಆಕೆ ಹರಿದ್ವಾರದಲ್ಲಿ ಪೂರಕ ಆಹಾರದ ಅಂಗಡಿ ನಡೆಸುತ್ತಿದ ಕೇಶವ ಪ್ರಸಾದ್ (28), ದಿಲ್ಲಿಯ ಜೊಹ್ರಿಪುರ ಪ್ರದೇಶದ ನಿರುದ್ಯೋಗಿ ವಿದ್ಯಾರ್ಥಿ ವಿವೇಕ್ ಸಿಂಗ್ (20) ಅನ್ನು ಸೇರಿಸಿಕೊಂಡು ತಂತ್ರ ರೂಪಿಸಿದ್ದಳು.
ಜುಲೈ 10ರಂದು ಮೂವರು ಉದ್ಯಮಿಯ ಮನೆಯ ಬಾಗಿಲು ತಟ್ಟಿದ್ದರು. ಬಿಳಿ ಅಂಗಿ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದ ಅವರು ಮುಖವನ್ನು ಮುಖವಾಡದಿಂದ ಮುಚ್ಚಿದ್ದರು. ಅವರು ತಾವು ಒಕ್ಲಾ ಶಾಖೆಯ ಸಿಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.
ಅವರು ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಹಾಗೂ ಮನೆಯ ಶೋಧ ನಡೆಸಲು ವಾರಂಟ್ ಇದೆ ಎಂದು ಹೇಳಿದರು. ಕುಟುಂಬ ದಾಖಲೆ ನೋಡಲು ಕೇಳಿದಾಗ ಅವರು ಗದರಿಸಿದರು ಹಾಗೂ ಸಹಕರಿಸಲು ಆಗ್ರಹಿಸಿದರು. ಅನಂತರ ಅವರು ಕಪಾಟನ್ನು ಒಡೆದರು ಹಾಗೂ ಅದರೊಳಗಿದ್ದ 3 ಲಕ್ಷ ರೂ. ನಗದು ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವುದಾಗಿ ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ದಾಖಲಾದ ಬಳಿಕ ಪೊಲೀಸರ ತಂಡಗಳು ಶೋಧ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.







