ಉತ್ತರಾಖಂಡ: ಕಾಡ್ಗಿಚ್ಚಿನಲ್ಲಿ ಸಿಲುಕಿ ದಾರಿ ತಪ್ಪಿದ ಮೂವರು ಚಾರಣಿಗರ ರಕ್ಷಣೆ

Photo credit:X/@RudraprayagPol
ಡೆಹ್ರಾಡೂನ್: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಕಾಡ್ಗಿಚ್ಚಿನ ಪರಿಣಾಮವಾಗಿ ದಾರಿ ತಪ್ಪಿದ ಮೂವರು ಚಾರಣಿಗರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ, ಜಿಲ್ಲಾ ವಿಪತ್ತು ನಿರ್ವಹಣಾ ಪಡೆ, ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮೂವರು ಚಾರಣಿಗರನ್ನು ರಕ್ಷಿಸಿದೆ.
ಈ ಕುರಿತು SDRF ಮಾಹಿತಿಯನ್ನು ನೀಡಿದ್ದು, ಸೋಮವಾರ ರಾತ್ರಿ ಅಧಿರಾಜ್ ಚೌಹಾಣ್ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮಂಗಳವಾರ ದಿಲ್ಲಿಯ ಲಜಪತ್ ನಗರದ ನಿವಾಸಿ ನಮನ್ ಯಾದವ್ ಮತ್ತು ಬಿಹಾರದ ನಿವಾಸಿ ಸಮೀರ್ ಕುಮಾರ್ ಪಾಂಡೆ ಅವರನ್ನು ರಕ್ಷಿಸಲಾಗಿದೆ. ಅವರಲ್ಲಿ ನಮನ್ ಯಾದವ್ ಗಾಯಗೊಂಡಿದ್ದು ಅವರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದೆ.
ರುದ್ರಪ್ರಯಾಗದ ದಟ್ಟ ಅರಣ್ಯದಲ್ಲಿ ಕಾಡ್ಗಿಚ್ಚಿನಲ್ಲಿ ಚಾರಣಿಗರು ನಾಪತ್ತೆಯಾದ ನಂತರ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.





