ತಿಲಕ, ರಕ್ಷಾಸೂತ್ರ, ಗೋಮೂತ್ರ; ಗಾರ್ಬಾ ಪ್ರವೇಶಕ್ಕೆ ವಿಎಚ್ಪಿ ಮಾನದಂಡ!

PC | ndtv
ಮುಂಬೈ : ನವರಾತ್ರಿ ಸಂದರ್ಭದ ಗಾರ್ಬಾ ಕಾರ್ಯಕ್ರಮಗಳಿಗೆ ಕೇವಲ ಹಿಂದೂಗಳು ಮಾತ್ರ ಆಗಮಿಸಬೇಕು ಎನ್ನುವುದನ್ನು ಖಾತರಿಪಡಿಸುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಹಣೆಗೆ ತಿಲಕ ಇಡಬೇಕು, ಪವಿತ್ರ ದಾರವನ್ನು ರಕ್ಷಾಸೂತ್ರವಾಗಿ ಕಟ್ಟಿಕೊಂಡಿರಬೇಕು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಹಿಂದೂದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಬೇಕು ಎಂದು ವಿಶ್ವಹಿಂದೂ ಪರಿಷತ್ ಪ್ರಕಟಿಸಿದೆ.
ಇದರ ಜತೆಗೆ ಬಂದ ಎಲ್ಲರಿಗೆ ಗೋಮೂತ್ರ ಚಿಮುಕಿಸಲಾಗುತ್ತದೆ ಎಂದು ವಿಎಚ್ಪಿ ವಿದರ್ಭ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತಿತ್ರೆ ಸ್ಪಷ್ಟಪಡಿಸಿದ್ದಾರೆ. ಈ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಾತರಿಪಡಿಸಲು ಎಲ್ಲ ಗಾರ್ಬಾ ಪೆಂಡಾಲ್ಗಳ ಮೇಲೆ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ನಿಗಾ ಇಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಭಾನುವಾರದಿಂದ ಅಕ್ಟೋಬರ್ 1ರವರೆಗೆ ನವರಾತ್ರಿ ಆಚರಣೆಗಳು ನಡೆಯುತ್ತವೆ.
ಹಿಂದೂಗಳು ಮಾತ್ರ ಗಾರ್ಬಾ ಕಾರ್ಯಕ್ರಮಗಳಿಗೆ ಆಗಮಿಸಬೇಕು ಮತ್ತು ಯಾವುದೇ ಲವ್ ಜಿಹಾದ್ ಪ್ರಕರಣಗಳು ಸಂಭವಿಸಬಾರದು ಎನ್ನುವುದನ್ನು ಖಾತರಿಪಡಿಸಲು ಇದು ಅಗತ್ಯ ಎಂದು ವಿಎಚ್ಪಿ ಪ್ರತಿಪಾದಿಸಿದೆ. "ಗಾರ್ಬಾ ಕೇವಲ ನೃತ್ಯವಲ್ಲ. ದೇವಿಯ ಆರಾದನೆ, ಅವರಿಗೆ ಮೂರ್ತಿಪೂಜೆಯಲ್ಲಿ ನಂಬಿಕೆ ಇಲ್ಲ. ಸಂಪ್ರದಾಯದಲ್ಲಿ ನಂಬಿಕೆ ಇರುವವರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗುತ್ತದೆ" ಎಂದು ವಿಎಚ್ಪಿ ರಾಷ್ಟ್ರೀಯ ವಕ್ತಾರ ಶ್ರೀರಾಜ್ ನಾಯರ್ ಹೇಳಿದ್ದಾರೆ.
ಇಂಥ ನಿರ್ದೇಶನ ನೀಡುವ ಮೂಲಕ ವಿಎಚ್ಪಿ ಹಾಗೂ ಸಂಘ ಪರಿವಾರ ಸಮಾಜ ವಿಭಜನೆಗೆ ಕುಮ್ಮಕ್ಕು ನೀಡುತ್ತಿವೆ ಎಂದು ವಿರೋಧ ಪಕ್ಷಗಳು ಆಪಾದಿಸಿವೆ. ಇದಕ್ಕೆ ತಿಗುರೇಟು ನೀಡಿರುವ ಮಹಾರಾಷ್ಟ್ರ ಬಿಜೆಪಿ ಮಾಧ್ಯಮ ಮುಖ್ಯಸ್ಥ ನವನಾಥ್ ಬಾನ್ "ಇದು ಹಿಂದೂ ಕಾರ್ಯಕ್ರಮ, ಇತರ ಧರ್ಮದವರು ಇದರಲ್ಲಿ ಹಸ್ತಕ್ಷೇಪ ಮಾಡಬಾರದು" ಎಂದು ಹೇಳಿದ್ದಾರೆ.
ಶಿವಸೇನೆ (ಯುಬಿಟಿ) ಬಣದ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವೂತ್, ಇದು ಕೋಮುಸಾಮರಸ್ಯ ಮೂಡಿಸುವ ಪ್ರಯತ್ನ ಎಂದು ವಿಶ್ಲೇಷಿಸಿದ್ದಾರೆ.







