ಭಾರತೀಯ ಮುಸ್ಲಿಮರಿಗೆ ಶಾಂತಿ ಬೇಕಿದೆ ಎಂಬ ನನ್ನ ಹೇಳಿಕೆಯನ್ನು ‘ಟೈಮ್ಸ್ ಆಫ್ ಇಂಡಿಯಾ’ ಸಂದರ್ಶನದಿಂದ ತೆಗೆದಿದೆ: ಝುಬಿನ್ ಮೆಹ್ತಾ ಆರೋಪ

ಝುಬಿನ್ ಮೆಹ್ತಾ (Photo: Wikimedia Commons)
ಹೊಸದಿಲ್ಲಿ: ಭಾರತದಲ್ಲಿನ ಮುಸ್ಲಿಮರು ಎಂದಿಗೂ ಶಾಂತಿಯುತವಾಗಿ ಬದುಕಬೇಕು ಎಂದು ನಾನು ಬಯಸುತ್ತೇನೆ ಎಂಬ ನನ್ನ ಹೇಳಿಕೆಯ ಒಂದು ಸಾಲನ್ನು The Times of India ಪತ್ರಿಕೆ ಪ್ರಕಟಿಸಿರುವ ನನ್ನ ಸಂದರ್ಶನದಿಂದ ತೆಗೆದು ಹಾಕಿದೆ ಎಂದು ಖ್ಯಾತ ಸಂಗೀತ ಸಂಯೋಜಕ ಝುಬಿನ್ ಮೆಹ್ತಾ ಆರೋಪಿಸಿದ್ದಾರೆ ಎಂದು thewire.in ವರದಿ ಮಾಡಿದೆ.
ತಾನು ಮುಂಬೈನಲ್ಲಿ ಬೆಳೆದು ಬಂದ ಬಗೆಯ ಕುರಿತು ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರೊಂದಿಗಿನ ಮುಕ್ತ ಮಾತುಕತೆಯ ಸಂದರ್ಭದಲ್ಲಿ ಝುಬಿನ್ ಮೆಹ್ತಾ ಈ ಹೇಳಿಕೆ ನೀಡಿದ್ದರು. ನಾವು ಯಾವ ಬಗೆಯ ದೇಶವಾಗಿ ಬದಲಾಗುತ್ತಿದ್ದೇವೆ? ನಿರ್ದಿಷ್ಟವಾಗಿ ಅಲ್ಪಸಂಖ್ಯಾತರೊಂದಿಗಿನ ವರ್ತನೆ, ವಿಶೇಷವಾಗಿ ಮುಸ್ಲಿಮರೊಂದಿಗಿನ ವರ್ತನೆಗೆ ಸಂಬಂಧಿಸಿದಂತೆ ಎಂದು ಸಂಗೀತ ಸಂಯೋಜಕ ಝುಬಿನ್ ಮೆಹ್ತಾರನ್ನು ಕರಣ್ ಥಾಪರ್ ಆ ಸಂದರ್ಶನದಲ್ಲಿ ಪ್ರಶ್ನಿಸಿದ್ದರು.
ಅದಕ್ಕೆ, “ಅವರು (ಮುಸ್ಲಿಮರು) ಮೋದಿ ಹಾಗೂ ಸರ್ಕಾರವನ್ನು ದೂರಲು ಬಯಸುವುದಿಲ್ಲ” ಎಂದು ಝಬಿನ್ ಮೆಹ್ತಾ ಪ್ರತಿಕ್ರಿಯಿಸಿದ್ದರು.
“ಯಾರನ್ನಾದರೂ ದೂರುವುದು ಹೇಗಿರುತ್ತದೆ? ಅವರು (ಮುಸ್ಲಿಮರು) ಪಾಕಿಸ್ತಾನದಲ್ಲಿ ಚರ್ಚ್ ಗಳನ್ನು ಸುಡುತ್ತಿದ್ದಾರೆ ಎಂದು ನಾನು ಇಂದು ಬೆಳಗ್ಗೆ ಓದಿದೆ. ಇಂತಹ ಧಾರ್ಮಿಕ ಕಿರುಕುಳದ ಹುಚ್ಚಿನಿಂದ ಜನರು ಹೊರಬರಬೇಕಿದೆ. ಆದರೆ, ಆಶಾದಾಯವಾಗಿ ಪರಿಸ್ಥಿತಿ ಬದಲಾಗಲಿದೆ” ಎಂದು ಝುಬಿನ್ ಮೆಹ್ತಾ ಭರವಸೆ ವ್ಯಕ್ತಪಡಿಸಿದ್ದರು.
ಇಸ್ರೇಲ್ ಪರಿಸ್ಥಿತಿಯ ಕುರಿತೂ ಮಾತಾಡಿರುವ ಝುಬಿನ್ ಮೆಹ್ತಾ, ಅಲ್ಲಿ ಶೀಘ್ರವೇ ಸರ್ಕಾರ ಬದಲಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ಅಲ್ಲಿನ ಸದ್ಯದ ಪರಿಸ್ಥಿತಿಯು ಭರಿಸಲಸಾಧ್ಯ ಎಂದೂ ಅವರು ಅಭಿಪ್ರಾಯ ಪಟ್ಟಿದ್ದರು.
ಭಾರತಕ್ಕೆ ಸಂಬಂಧಿಸಿದಂತೆ ಝುಬಿನ್ ಮೆಹ್ತಾ ನೀಡಿರುವ ಹೇಳಿಕೆಯು The Times Of India ಸುದ್ದಿ ಸಂಸ್ಥೆಯ ಮುದ್ರಣ ಆವೃತ್ತಿಯಲ್ಲಿ ಕಂಡು ಬಂದಿಲ್ಲ. ಆದರೆ, ಆಗಸ್ಟ್ 21ರ ಬೆಳಗ್ಗೆ 11 ಗಂಟೆಗೆ ಅದರ ಅಂತರ್ಜಾಲ ಆವೃತ್ತಿಯನ್ನು The Wire ತಂಡವು ಪರಿಶೀಲಿಸಿದಾಗ, ಅಲ್ಲಿ ಆ ಹೇಳಿಕೆ ದಾಖಲಾಗಿರುವುದು ಕಂಡು ಬಂದಿದೆ.
ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿನ ಝುಬಿನ್ ಮೆಹ್ತಾರ ಹೇಳಿಕೆಗೆ ಪ್ರತಿಕ್ರಿಯಿಸಿರುವ The Times of India ಸುದ್ದಿ ಸಂಸ್ಥೆಯು, ಸಂದರ್ಶನವನ್ನು ಪತ್ರಿಕೆಯ ಪುಟಕ್ಕೆ ಹೊಂದುವಂತೆ ಸಂಕಲಿಸಲಾಗಿದೆ ಹಾಗೂ ನೀವು ಉಲ್ಲೇಖಿಸಿರುವ ಸಾಲು ಸಂದರ್ಶನದ ಕೊನೆಯ ಭಾಗಕ್ಕೆ ಸೇರಿದ್ದು, ಸಂಕಲಿಸುವ ಪ್ರಕ್ರಿಯೆಯಲ್ಲಿ ಆ ಸಾಲು ಬಿಟ್ಟು ಹೋಗಿದೆ. ನೀವು ಈ ಕುರಿತು ಸಂದರ್ಶಕರೊಂದಿಗೆ ಮಾತುಕತೆ ನಡೆಸಿದ ನಂತರ ಆ ಸಾಲನ್ನು ಅಂತರ್ಜಾಲ ಆವೃತ್ತಿಯಲ್ಲಿ ಮರು ಸ್ಥಾಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.







