ಮಿಲಿಂದ್ ದಿಯೋರಾ ರಾಜಿನಾಮೆ ಘೋಷಿಸುವ ಸಮಯ ಮೋದಿಯಿಂದ ನಿರ್ಧರಿತವಾಗಿದೆ: ಕಾಂಗ್ರೆಸ್ ಆರೋಪ
ಮಿಲಿಂದ್ ದಿಯೋರಾ / ಜೈರಾಮ್ ರಮೇಶ್ (Photo:X/@milinddeora, PTI)
ಇಂಫಾಲ: ಭಾರತ್ ಜೋಡೊ ನ್ಯಾಯ ಯಾತ್ರೆ ಪ್ರಾರಂಭವಾಗಲು ಇನ್ನು ಕೆಲವೇ ಹೊತ್ತು ಬಾಕಿ ಇರುವಾಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಿಲಿಂದ್ ದಿಯೋರಾ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದು, ಅವರ ರಾಜಿನಾಮೆ ಘೋಷಣೆ ಸಮಯ ಪ್ರಧಾನಿ ನರೇಂದ್ರ ಮೋದಿಯಿಂದ ನಿರ್ಧರಿತವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಶುಕ್ರವಾರ ನನ್ನೊಂದಿಗೆ ಮಾತನಾಡಿದ್ದ ಮಿಲಿಂದ್ ದಿಯೋರಾ, ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದ ಮೇಲೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಹಕ್ಕು ಪ್ರತಿಪಾದಿಸುತ್ತಿರುವ ಕುರಿತ ನನ್ನ ಕಳವಳವನ್ನು ರಾಹುಲ್ ಗಾಂಧಿಯವರಿಗೆ ತಿಳಿಸಿ ಎಂದು ಮನವಿ ಮಾಡಿದ್ದರು ಎಂದು ಹೇಳಿದ್ದಾರೆ.
ಮಿಲಿಂದ್ ದಿಯೋರಾ ಹಾಗೂ ಅವರ ತಂದೆ ಮುರಳಿ ದಿಯೋರಾ ಇಬ್ಬರೂ ದಕ್ಷಿಣ ಮುಂಬೈನ ಸಂಸದರಾಗಿ ಸೇವೆ ಸಲ್ಲಿಸಿದ್ದರು.
“ಶುಕ್ರವಾರ ಬೆಳಗ್ಗೆ 8.52 ಗಂಟೆಗೆ ಅವರು ನನಗೆ ಸಂದೇಶ ಕಳಿಸಿದರು ಹಾಗೂ ನಾನು ಮಧ್ಯಾಹ್ಯ 2.47ರ ವೇಳೆಗೆ “ನೀವು ಪಕ್ಷ ಬದಲಿಸುವ ಯೋಜನೆಯಲ್ಲಿದ್ದೀರಾ?” ಎಂದು ಪ್ರತಿಕ್ರಿಯಿಸಿದ್ದೆ. ಮತ್ತೆ 2.48 ಗಂಟೆಗೆ ನನಗೆ ಸಂದೇಶ ಕಳಿಸಿದ್ದ ಅವರು, “ನಿಮ್ಮೊಂದಿಗೆ ಮಾತನಾಡಲು ಸಾಧ್ಯವಿಲ್ಲವೆ?” ಎಂದು ಪ್ರಶ್ನಿಸಿದ್ದರು. ಅದಕ್ಕೆ ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದು ಹೇಳಿ, ಮಧ್ಯಾಹ್ನ 3.40ರ ವೇಳೆಗೆ ಅವರೊಂದಿಗೆ ಮಾತನಾಡಿದ್ದೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
“ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರಕ್ಕೆ ಹಾಲಿ ಶಿವಸೇನೆಯ ಸಂಸದರಿರುವ ಬಗ್ಗೆ ನಾನು ಕಳವಳಗೊಂಡಿದ್ದೇನೆ. ನಾನು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ, ಅವರಿಗೆ ಆ ಕ್ಷೇತ್ರದ ಕುರಿತು ವಿವರಿಸಬೇಕಿದೆ. ನೀವೂ ಕೂಡಾ ಈ ಕುರಿತು ರಾಹುಲ್ ಗಾಂಧಿಯವರೊಂದಿಗೆ ಮಾತನಾಡಿ” ಎಂದು ಮಿಲಿಂದ್ ದಿಯೋರಾ ನನಗೆ ಮನವಿ ಮಾಡಿದರು ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
“ಖಂಡಿತ ಇದೆಲ್ಲ ನಾಟಕವಾಗಿದ್ದು, ಅವರು ಪಕ್ಷವನ್ನು ತೊರೆಯುವ ನಿರ್ಧಾರ ಮಾಡಿದ್ದರು. ಆದರೆ, ಅವರು ಪಕ್ಷವನ್ನು ತೊರೆಯುವ ಪ್ರಕಟಣೆಯ ಸಮಯ ಪ್ರಧಾನಿ ನರೇಂದ್ರ ಮೋದಿಯಿಂದ ನಿರ್ಧರಿತವಾಗಿತ್ತು” ಎಂದು ಅವರು ಆರೋಪಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಮಿಲಿಂದ್ ದಿಯೋರಾ ರವಿವಾರ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.