ಎನ್‌ಸಿಇಆರ್‌ಟಿಯ 8ನೇ ತರಗತಿಯ ನೂತನ ಸಮಾಜ ವಿಜ್ಞಾನ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್, ಆಂಗ್ಲೋ-ಮೈಸೂರು ಯುದ್ಧಗಳು ನಾಪತ್ತೆ

ಹೊಸದಿಲ್ಲಿ: ವಸಾಹತುಶಾಹಿ ಆಡಳಿತದ ಕುರಿತು ಅಧ್ಯಾಯದಿಂದ ಟಿಪ್ಪು ಸುಲ್ತಾನ್‌ರಂತಹ ಪ್ರಮುಖ ಐತಿಹಾಸಿಕ ವ್ಯಕ್ತಿಗಳನ್ನು ಮತ್ತು ಆಂಗ್ಲೋ-ಮೈಸೂರು ಯದ್ಧಗಳಂತಹ ಘಟನೆಗಳನ್ನು ಕೈಬಿಟ್ಟಿರುವುದಕ್ಕಾಗಿ ಎನ್‌ಸಿಇಆರ್‌ಟಿಯ 8ನೇ ತರಗತಿಯ ನೂತನ ಸಮಾಜ ವಿಜ್ಞಾನ ಪಠ್ಯಪುಸ್ತಕವು ಗಮನವನ್ನು ಸೆಳೆದಿದೆ. ಪುಸ್ತಕವು ಹೊಸ ಆರ್ಥಿಕ ಮತ್ತು ಸಾಂಸ್ಕೃತಿಕ ದೃಷ್ಟಿಕೋನಗಳನ್ನು ಒದಗಿಸಿದ್ದು, ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಯ ವಿರುದ್ಧ ಭಾರತದ ಪ್ರತಿರೋಧದ ಚಿತ್ರಣದಲ್ಲಿಯ ಲೋಪಗಳನ್ನು ಟೀಕಾಕಾರರು ಪ್ರಶ್ನಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
‘ಎಕ್ಸ್‌ಪ್ಲೋರಿಂಗ್ ಸೊಸೈಟಿ:ಇಂಡಿಯಾ ಆ್ಯಂಡ್ ಬಿಯಾಂಡ್(ಭಾಗ 1)’ ಶೀರ್ಷಿಕೆಯ ಪಠ್ಯಪುಸ್ತಕವು ವಾಸ್ಕೋ ಡಾ ಗಾಮಾನಿಂದ ಆರಂಭಿಸಿ 1400ರ ದಶಕದ ಉತ್ತರಾರ್ಧದಲ್ಲಿ ಭಾರತಕ್ಕೆ ಐರೋಪ್ಯರ ಆಗಮನವನ್ನು ಗುರುತಿಸಿದೆ. ಪ್ಲಾಸಿ ಕದನ(1757),ವಸಾಹತುಶಾಹಿ ಆಡಳಿತದಡಿ ಆರ್ಥಿಕ ಶೋಷಣೆ ಮತ್ತು 1857ರ ಸಿಪಾಯಿ ದಂಗೆಯಂತಹ ಘಟನೆಗಳನ್ನು ಎತ್ತಿ ತೋರಿಸುವ ಮೂಲಕ ಪುಸ್ತಕವು ಬ್ರಿಟಿಷರು ಹೇಗೆ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದಿದ್ದರು ಮತ್ತು ಸಾಂಪ್ರದಾಯಿಕ ಜೀವನಕ್ಕೆ ಅಡ್ಡಿಯನ್ನುಂಟು ಮಾಡಿದ್ದರು ಎನ್ನುವುದನ್ನು ಬಿಂಬಿಸಿದೆ.
ಹಿಂದಿನ ಪಠ್ಯಪುಸ್ತಕಕ್ಕಿಂತ ಭಿನ್ನವಾಗಿ ಹೊಸ ಆವೃತ್ತಿಯಲ್ಲಿ ದಕ್ಷಿಣ ಭಾರತದಲ್ಲಿ ಬ್ರಿಟಿಷ್ ವಿಸ್ತರಣೆಗೆ ಪ್ರತಿರೋಧದಲ್ಲಿ ಮುಖ್ಯ ಅಧ್ಯಾಯವಾದ ಟಿಪ್ಪು ಸುಲ್ತಾನ್, ಹೈದರ್ ಅಲಿ ಮತ್ತು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳನ್ನು ಕೈಬಿಡಲಾಗಿದೆ. ಒಂದು ಕಾಲದಲ್ಲಿ ಬ್ರಿಟಿಷ್ ಆಡಳಿತದ ಪ್ರಮುಖ ವಿರೋಧಿಗಳಾಗಿದ್ದ ಈ ಆಡಳಿತಗಾರರು ಪರಿಷ್ಕೃತ ವಸಾಹತುಶಾಹಿ ನಿರೂಪಣೆಯಲ್ಲಿ ಮಾಯವಾಗಿದ್ದಾರೆ.
ಮೈಸೂರಿನ ಪ್ರತಿರೋಧದ ಬಗ್ಗೆ ಪುಸ್ತಕದಲ್ಲಿ ಮಾಹಿತಿ ಇಲ್ಲದಿದ್ದರೂ ಅದು ಸನ್ಯಾಸಿ-ಫಕೀರ್ ದಂಗೆ, ಕೋಲ್ ದಂಗೆ ಮತ್ತು ಸಂತಾಲ್ ಬಂಡಾಯದಂತಹ ಆರಂಭಿಕ ದಂಗೆಗಳನ್ನು ಒಳಗೊಂಡಿದೆ. ಮರಾಠರ ಕುರಿತು ಪ್ರತ್ಯೇಕ ಅಧ್ಯಾಯವು ಆಂಗ್ಲೋ-ಮರಾಠಾ ಯುದ್ಧಗಳನ್ನು ಉಲ್ಲೇಖಿಸಿದ್ದು, ‘ಬ್ರಿಟಿಷರು ಭಾರತವನ್ನು ಮುಘಲರು ಅಥವಾ ಇತರ ಯಾವುದೇ ಶಕ್ತಿಗಿಂತ ಹೆಚ್ಚಾಗಿ ಮರಾಠರಿಂದ ಭಾರತವನ್ನು ವಶಪಡಿಸಿಕೊಂಡಿದ್ದರು’ ಎಂದು ಹೇಳಿದೆ.
‘ಪ್ರಸಕ್ತ 8ನೇ ತರಗತಿಯ ಪುಸ್ತಕವು ಸಮಗ್ರ ವಿವರಗಳ ಬದಲಾಗಿ ಅವಲೋಕನವೊಂದನ್ನು ಒದಗಿಸಿದೆ. ನಾವು ಪ್ರತಿಯೊಂದನ್ನೂ ಸೇರಿಸಲು ಪ್ರಯತ್ನಿಸಿದರೆ ಪಠ್ಯಪುಸ್ತಕಗಳನ್ನು ದಿನಾಂಕಗಳು ಮತ್ತು ಯುದ್ಧಗಳಿಂದ ತುಂಬಿಸುವ ಹಳೆಯ ವಿಧಾನಕ್ಕೇ ಮರಳುತ್ತೇವೆ’ ಎಂದು ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮೈಕೆಲ್ ಡ್ಯಾನಿನೋ ಸ್ಪಷ್ಟನೆಯನ್ನು ನೀಡಿದರು. ಭಾಗ 2ರಲ್ಲಿ ಟಿಪ್ಪು ಸುಲ್ತಾನ್ ಕಾಣಿಸಿಕೊಳ್ಳಬಹುದೇ ಎಂಬ ಪ್ರಶ್ನೆಗೆ ಅವರು ‘ಬಹುಶಃ ಇಲ್ಲ’ ಎಂದು ಉತ್ತರಿಸಿದರು.
ಪಠ್ಯಪುಸ್ತಕವು ವಸಾಹತುಶಾಹಿ ಶೋಷಣೆ ಮತ್ತು ಸಾಂಸ್ಕೃತಿಕ ಲೂಟಿಯ ಕುರಿತು ಪ್ರಮುಖ ದೃಷ್ಟಿಕೋನಗಳನ್ನು ಒದಗಿಸಿದೆಯಾದರೂ ಅದು ಟಿಪ್ಪು ಸುಲ್ತಾನ್‌ರಂತಹ ಪ್ರಮುಖ ಬ್ರಿಟಿಷ್ ವಿರೋಧಿಗಳನ್ನು ಕೈಬಿಟ್ಟಿರುವುದು ಪುಸ್ತಕವು ಭಾರತದ ವಸಾಹತುಶಾಹಿ ಭೂತಕಾಲದ ಸಮಗ್ರ ದೃಷ್ಟಿಕೋನವನ್ನು ಪ್ರಸ್ತುತ ಪಡಿಸುತ್ತದೆಯೇ ಎಂಬ ಬಗ್ಗೆ ಕಳವಳಗಳನ್ನು ಸೃಷ್ಟಿಸಿದೆ. ಇತಿಹಾಸದ ಇಂತಹ ಅಧ್ಯಾಯಗಳನ್ನು ಬಿಡುವುದು ಭಾರತದ ವೈವಿಧ್ಯಮಯ ಬ್ರಿಟಿಷ್ ವಿರೋಧಿ ಹೋರಾಟದ ಬಗ್ಗೆ ವಿದ್ಯಾರ್ಥಿಗಳ ತಿಳುವಳಿಕೆಯನ್ನು ಕುಂದಿಸುತ್ತದೆ ಎಂದು ಟೀಕಾಕಾರರು ವಾದಿಸಿದ್ದಾರೆ.







