ನೀತಿ ಸಂಹಿತೆ ಉಲ್ಲಂಘನೆ : ತಿರುಪತಿ ದೇವಸ್ಥಾನದ ಮಂಡಳಿಯಿಂದ ನಾಲ್ವರು ಉದ್ಯೋಗಿಗಳ ಅಮಾನತು

ತಿರುಪತಿ ದೇವಸ್ಥಾನ | PC : NDTV
ತಿರುಪತಿ: ಸಂಸ್ಥೆಯ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಹಿಂದುಯೇತರ ಧರ್ಮವನ್ನು ಪಾಲಿಸುತ್ತಿದ್ದ ಆರೋಪದಲ್ಲಿ ತನ್ನ ನಾಲ್ವರು ಉದ್ಯೋಗಿಗಳನ್ನು ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಆಡಳಿತ ಮಂಡಳಿಯು ಅಮಾನತುಗೊಳಿಸಿದೆ.
ಆಂತರಿಕ ತನಿಖೆಯ ಬಳಿಕ ಬಿ.ಎಲಿಝೆರ್(ಉಪ ಕಾರ್ಯ ನಿರ್ವಾಹಕ ಇಂಜಿನಿಯರ್,ಗುಣಮಟ್ಟ ನಿಯಂತ್ರಣ), ಎಸ್.ರೋಸಿ(ಸ್ಟಾಫ್ ನರ್ಸ್,ಬಿಐಆರ್ಆರ್ಡಿ ಆಸ್ಪತ್ರೆ), ಎಂ.ಪ್ರೇಮಾವತಿ(ಗ್ರೇಡ್-1 ಫಾರ್ಮಾಸಿಸ್ಟ್, ಬಿಐಆರ್ಆರ್ಡಿ ಆಸ್ಪತ್ರೆ) ಮತ್ತು ಡಾ.ಜಿ.ಅಸುಂತ (ಎಸ್ವಿ ಆಯುರ್ವೇದ ಫಾರ್ಮಸಿ) ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಟಿಟಿಡಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಿರುಮಲದಲ್ಲಿರುವ ವಿಶ್ವಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿರುವ ಟಿಟಿಡಿ ತನ್ನ ಉದ್ಯೋಗಿಗಳಿಗೆ, ವಿಶೇಷವಾಗಿ ಧಾರ್ಮಿಕ ಅಥವಾ ಸಂಬಂಧಿತ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಕಟ್ಟುನಿಟ್ಟಿನ ನೀತಿ ಸಂಹಿತೆಯನ್ನು ಅನುಸರಿಸುತ್ತಿದೆ. ಟಿಟಿಡಿ ವ್ಯವಸ್ಥೆಯೊಳಗೆ ಕೆಲಸ ಮಾಡುವ ವ್ಯಕ್ತಿಗಳು ನಡವಳಿಕೆ ಮತ್ತು ಆಚರಣೆ ಎರಡರಲ್ಲಿಯೂ ಹಿಂದು ಧರ್ಮದ ತತ್ವಗಳನ್ನು ಪಾಲಿಸುವುದನ್ನು ನೀತಿ ಸಂಹಿತೆಯು ಕಡ್ಡಾಯಗೊಳಿಸಿದೆ.
ಜಾಗ್ರತ ವರದಿಯು ಉದ್ಯೋಗಿಗಳ ಧರ್ಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಳಿಕ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅಮಾನತುಗೊಂಡಿರುವ ಸಿಬ್ಬಂದಿಗಳು ಹಿಂದುಯೇತರ ಧರ್ಮವನ್ನು ಪಾಲಿಸುತ್ತಿದ್ದನ್ನು ಆಂತರಿಕ ವಿಚಾರಣೆಯು ದೃಢಪಡಿಸಿದ್ದು,ಇದು ಸಾಂಸ್ಥಿಕ ಮಾರ್ಗಸೂಚಿಗಳ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.
ಸಿಬ್ಬಂದಿಗಳ ಅಮಾನತು ಸಾರ್ವಜನಿಕವಾಗಿ ಧನಸಹಾಯ ಪಡೆಯುವ ಅಥವಾ ನಿರ್ವಹಿಸಲ್ಪಡುವ ಧರ್ಮಾಧಾರಿತ ಸಂಸ್ಥೆಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಗಡಿಗಳ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ.
ವಿಷಯವು ಭಾರತದ ದೇವಸ್ಥಾನ ಆಡಳಿತ ವ್ಯವಸ್ಥೆಗಳಲ್ಲಿ ಉದ್ಯೋಗ ಹಕ್ಕುಗಳು ಮತ್ತು ಧಾರ್ಮಿಕ ಮಾರ್ಗಸೂಚಿಗಳ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಬಹುದು.
ಹಿಂದುಯೇತರ ಉದ್ಯೋಗಿಗಳನ್ನು ವಜಾಗೊಳಿಸುವಂತೆ ಜು.11ರಂದು ಟಿಟಿಡಿಗೆ ಆಗ್ರಹಿಸಿದ್ದ ಕೇಂದ್ರ ಸಹಾಯಕ ಗೃಹಸಚಿವ ಬಂಡಿ ಸಂಜಯ ಕುಮಾರ್ ಅವರು,ಈಗಲೂ ಒಂದು ಸಾವಿರಕ್ಕೂ ಅಧಿಕ ಹಿಂದುಯೇತರರು ಟಿಟಿಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.







