ಜಿ.ಎನ್. ಸಾಯಿಬಾಬಾರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟಿಐಎಸ್ಎಸ್ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

Photo: Facebook
ಮುಂಬೈ: ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿ.ಐ.ಎಸ್.ಎಸ್) ಕ್ಯಾಂಪಸ್ನಲ್ಲಿ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಅವರ ಮೊದಲ ಪುಣ್ಯತಿಥಿ ಅಂಗವಾಗಿ ನಡೆದ ನೆನಪಿನ ಕಾರ್ಯಕ್ರಮ ವಿವಾದದ ಸ್ವರೂಪ ಪಡೆದುಕೊಂಡಿದೆ. ಸಭೆಯಲ್ಲಿ ಭಾಗವಹಿಸಿದ್ದ ಕೆಲವು ವಿದ್ಯಾರ್ಥಿಗಳನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದು, ಕ್ಯಾಂಪಸ್ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳು ಕ್ಯಾಂಪಸ್ ಆವರಣದಲ್ಲಿ ಸಾಯಿಬಾಬಾ ಅವರ ಚಿತ್ರಗಳನ್ನು ಹಿಡಿದು ಮೇಣದಬತ್ತಿಗಳನ್ನು ಬೆಳಗಿಸಿದ್ದರು. ಈ ಹಿನ್ನೆಲೆಯಲ್ಲಿ “ರಾಷ್ಟ್ರದ ವಿರುದ್ಧ ಪಿತೂರಿ”, “ಗುಂಪುಗಳ ನಡುವೆ ದ್ವೇಷ ಸೃಷ್ಟಿಸುವುದು” ಹಾಗೂ “ಕಾನೂನುಬಾಹಿರವಾಗಿ ಸಭೆ ನಡೆಸುವುದು” ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳಡಿ ಕನಿಷ್ಠ ಹತ್ತು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ indianexpress.com ವರದಿ ಮಾಡಿದೆ.
ಶೇಕಡಾ 90 ಕ್ಕೂ ಹೆಚ್ಚು ಅಂಗವೈಕಲ್ಯದಿಂದ ಬಳಲುತ್ತಿದ್ದ ಪ್ರೊ. ಸಾಯಿಬಾಬಾ ಅವರನ್ನು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದಡಿ ಸುಮಾರು ಒಂದು ದಶಕ ಕಾಲ ಜೈಲಿನಲ್ಲಿರಿಸಲಾಗಿತ್ತು. ಕಳೆದ ವರ್ಷ ಅವರು ಎಲ್ಲಾ ಆರೋಪಗಳಿಂದ ವಿಮುಕ್ತರಾದರೂ, ಆರೋಗ್ಯ ಹದಗೆಟ್ಟ ಪರಿಣಾಮ ಅಕ್ಟೋಬರ್ 12, 2024ರಂದು ನಿಧನರಾದರು.
ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪ್ರಕಾರ, ಕಾರ್ಯಕ್ರಮದಲ್ಲಿ ಯಾವುದೇ ಘೋಷಣೆಗಳನ್ನು ಕೂಗುವುದು ಅಥವಾ ಭಾಷಣ ಮಾಡಲಾಗಿಲ್ಲ. “ನಾವು ಕೆಲವೇ ಕ್ಷಣಗಳ ಕಾಲ ಮೇಣದಬತ್ತಿಗಳನ್ನು ಬೆಳಗಿಸಿ ನಿಂತಿದ್ದೆವು,” ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ. ಆದರೆ ನಂತರ ಕೆಲವು ಬಲಪಂಥೀಯ ವಿದ್ಯಾರ್ಥಿಗಳು ಸ್ಥಳಕ್ಕೆ ಬಂದು ಸಾಯಿಬಾಬಾ ಅವರ ಫೋಟೋಗಳನ್ನು ಹರಿದು ಹಾಕಿ ನಿಂದನೆ ಮಾಡಿದರೆಂದು ಅವರು ಆರೋಪಿಸಿದ್ದಾರೆ.
ಈ ಘಟನೆಯ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮುಂಬೈ ಪೊಲೀಸರು ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಟ್ಯಾಗ್ ಮಾಡಲಾಯಿತು. ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿನ ಪೋಸ್ಟ್ ಗೆ ಮುಂಬೈ ಪೊಲೀಸರು ತ್ವರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಬಳಿಕ ಟ್ರಾಂಬೆ ಠಾಣೆಯ ಪೊಲೀಸರು ಕ್ಯಾಂಪಸ್ಗೆ ಧಾವಿಸಿ ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ವರದಿಯಾಗಿದೆ.
ಸಂಜೆಯ ವೇಳೆಗೆ ಪೊಲೀಸರು ಕ್ಯಾಂಪಸ್ ನಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ಕನಿಷ್ಠ ನಾಲ್ಕು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಗಳ ಮೊಬೈಲ್ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಇನ್ನೂ ಕೆಲವರ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ, ವಿಳಾಸಗಳನ್ನು ಪಡೆಯುತ್ತಿದ್ದಾರೆ ಎಂದು ವಿದ್ಯಾರ್ಥಿಗಳು thewire.in ಗೆ ತಿಳಿಸಿದ್ದಾರೆ
ಬಂಧಿತರ ಪರವಾಗಿ ಇತರ ವಿದ್ಯಾರ್ಥಿಗಳು ಹಾಸ್ಟೆಲ್ ಆವರಣದಲ್ಲಿ ಒಗ್ಗಟ್ಟಿನ ಪ್ರದರ್ಶನ ನಡೆಸಿದ ವೇಳೆ, ಪೊಲೀಸರು ಅವರ ವಿವರಗಳನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳು ಯಾವುದೇ ಅಧಿಕೃತ ಅನುಮತಿ ಪಡೆಯದೆ ಕ್ಯಾಂಪಸ್ನಲ್ಲಿ ಸಭೆ ನಡೆಸಿದ್ದಾರೆ ಎಂದು ಟಿ.ಐ.ಎಸ್.ಎಸ್ ಹೇಳಿದೆ.
ಯಾವುದೇ ಘೋಷಣೆಗಳನ್ನು ಕೂಗಿಲ್ಲ. ಪೊಲೀಸರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಸ್ಪಷ್ಟನೆ ನೀಡಿದ್ದಾರೆ.







