ಮಹುವಾ ಮೊಯಿತ್ರಾರನ್ನು ಬೆಂಬಲಿಸಿದ್ದಕ್ಕೆ ದೇಶದ ಕ್ಷಮೆ ಯಾಚಿಸಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ!

ಕಲ್ಯಾಣ್ ಬ್ಯಾನರ್ಜಿ , ಮಹುವಾ ಮೊಯಿತ್ರಾ | PTI
ಹೊಸದಿಲ್ಲಿ: ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ನಿನ್ನೆಯಷ್ಟೇ ತೃಣಮೂಲ ಕಾಂಗ್ರೆಸ್ ಪಕ್ಷದ ಲೋಕಸಭಾ ಮುಖ್ಯ ಸಚೇತಕ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಸಂಸದ ಕಲ್ಯಾಣ್ ಬ್ಯಾನರ್ಜಿ, ಮಂಗಳವಾರ ಮಹುವಾ ಮೊಯಿತ್ರಾ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
“ಮಹುವಾ ಮೊಯಿತ್ರಾಗೆ ಕೃತಜ್ಞತೆಯ ಕೊರತೆಯಿದೆ ಹಾಗೂ ಆಕೆಯನ್ನು ಬೆಂಬಲಿಸಿದ್ದಕ್ಕಾಗಿ ನಾನು ದೇಶದ ಕ್ಷಮೆ ಯಾಚಿಸುತ್ತೇನೆ” ಎಂದು ಅವರು ಮಹುವಾ ಮೊಯಿತ್ರಾ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಲ್ಯಾಣ್ ಬ್ಯಾನರ್ಜಿ, “2023ರಲ್ಲಿ ಮಹುವಾ ಮೊಯಿತ್ರಾ ಲೋಕಸಭೆಯಲ್ಲಿ ಕೆಂಗಣ್ಣಿಗೆ ಗುರಿಯಾಗಿದ್ದಾಗ, ನಾನು ಆಕೆಯ ಬೆನ್ನಿಗೆ ನಿಂತಿದ್ದೆ. ನಾನು ಹಾಗೆ ಮಾಡಿದ್ದು ನನ್ನ ವಿವೇಚನೆಯಿಂದಲೇ ಹೊರತು, ಒತ್ತಡದಿಂದಲ್ಲ. ಇಂದು ಆಕೆ ನನ್ನನ್ನು ಸ್ತ್ರೀದ್ವೇಷಿ ಎಂದು ಕರೆಯುವ ಮೂಲಕ ನನಗೆ ಕೃತಘ್ನತೆ ತೋರಿದ್ದಾರೆ. ಕೃತಜ್ಞತೆಯ ಸಲ್ಲಿಸಲು ಮರೆತ ವ್ಯಕ್ತಿಯೊಬ್ಬರನ್ನು ಬೆಂಬಲಿಸಿದ್ದಕ್ಕಾಗಿ ನಾನು ದೇಶದ ಕ್ಷಮೆ ಕೋರುತ್ತೇನೆ. ಆಕೆ ಏನು ಎಂದು ಅರ್ಥ ಮಾಡಿಕೊಳ್ಳಲು ಜನರೇ ಆಕೆಯ ಮಾತುಗಳನ್ನು ಗಮನಿಸಿಲಿ ಹಾಗೂ ಅದರಂತೆ ತೀರ್ಮಾನ ಕೈಗೊಳ್ಳಲಿ” ಎಂದು ಪೋಸ್ಟ್ ಮಾಡಿದ್ದಾರೆ.
ಕಲ್ಯಾಣ್ ಬ್ಯಾನರ್ಜಿ ಈ ಪೋಸ್ಟ್ ಮಾಡಿದ ಕೆಲ ಗಂಟೆಗಳ ನಂತರ, ಪಕ್ಷದ ನೂತನ ಮುಖ್ಯ ಸಚೇತಕರಾಗಿ ನೇಮಕವಾಗಿರುವ ಸಂಸದ ಕಾಕೋಲಿ ಘೋಷ್ ದಸ್ತಿದಾರ್ ಅವರನ್ನು ಮಹುವಾ ಮೊಯಿತ್ರಾ ಅಭಿನಂದಿಸಿದ್ದಾರೆ. “ಲೋಕಸಭೆಯಲ್ಲಿ, ಮುಖ್ಯ ಸಚೇತಕ ಹಾಗೂ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪಕ್ಷದ ಉಪ ನಾಯಕರಾಗಿ ನೇಮಕಗೊಂಡಿರುವ ನನ್ನ ಹಿರಿಯ ಸಹೋದ್ಯೋಗಿ ಕಾಕೋಲಿ ಘೋಷ್ ದಸ್ತಿದಾರ್ ಅವರಿಗೆ ಅಭಿನಂದನೆಗಳು” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಕಲ್ಯಾಣ್ ಬ್ಯಾನರ್ಜಿ ಹಾಗೂ ಮಹುವಾ ಮೊಯಿತ್ರಾ ನಡುವೆ ಪರಸ್ಪರ ವಾಕ್ಸಮರ ನಡೆಯುತ್ತಿದೆ. ಇತ್ತೀಚೆಗೆ ಪಾಡ್ ಕಾಸ್ಟ್ ಒಂದರಲ್ಲಿ ಮಹುವಾ ಮೊಯಿತ್ರಾ ನೀಡಿದ್ದ ಹೇಳಿಕೆಯಿಂದ ಇವರಿಬ್ಬರು ನಾಯಕರ ನಡುವೆ ಮತ್ತೊಮ್ಮೆ ವಾಕ್ಸಮರ ಸ್ಫೋಟಗೊಂಡಿತ್ತು.
“ನಾನು ಹಂದಿಯೊಂದಿಗೆ ಗುದ್ದಾಡುವುದಿಲ್ಲ. ಯಾಕೆಂದರೆ, ಹಂದಿ ಅದನ್ನು ಇಷ್ಟಪಡುತ್ತದೆ ಹಾಗೂ ನೀವು ಕೊಳಕಾಗುತ್ತೀರಿ” ಎಂದು ಕಲ್ಯಾಣ್ ಬ್ಯಾನರ್ಜಿ ತಮ್ಮ ವಿರುದ್ಧ ನಡೆಸುತ್ತಿರುವ ಮೌಖಿಕ ವಾಗ್ದಾಳಿ ಕುರಿತು ಕೇಳಲಾದ ಪ್ರಶ್ನೆಗೆ ಮಹುವಾ ಮೊಯಿತ್ರಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಈ ಹೇಳಿಕೆ ಕಲ್ಯಾಣ್ ಬ್ಯಾನರ್ಜಿಯನ್ನು ಮತ್ತಷ್ಟು ಕೆರಳಿಸಿತ್ತು.







