“ನೀವು ಎದ್ದು ನಿಲ್ಲುವಿರಿ, ಉಮರ್ ಖಾಲಿದ್”: ಸುಪ್ರೀಂ ಕೋರ್ಟ್ ಜಾಮೀನು ನಿರಾಕರಣೆ ಬೆನ್ನಲ್ಲೆ ಕವಿತೆ ಹಂಚಿಕೊಂಡ ಮಹುವಾ ಮೊಯಿತ್ರಾ

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ (PTI)
ಹೊಸದಿಲ್ಲಿ: 2020ರ ಈಶಾನ್ಯ ದಿಲ್ಲಿ ಗಲಭೆಗಳ ಹಿಂದಿನ ಪಿತೂರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಉಮರ್ ಖಾಲಿದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ, ಅವರನ್ನು ಬೆಂಬಲಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಬುಧವಾರ ಸಣ್ಣ ಕವಿತೆಯೊಂದನ್ನು ಹಂಚಿಕೊಂಡಿದ್ದಾರೆ.
“ನೀವು ಎದ್ದು ನಿಲ್ಲುವಿರಿ, ಉಮರ್ ಖಾಲಿದ್” ಎಂಬ ಶೀರ್ಷಿಕೆಯೊಂದಿಗೆ ಅವರು ಸಾಮಾಜಿಕ ಜಾಲತಾಣ Xನಲ್ಲಿ ಕವಿತೆಯನ್ನು ಹಂಚಿಕೊಂಡಿದ್ದಾರೆ. ಕವಿತೆಯಲ್ಲಿ, “ನೀವು ನನ್ನನ್ನು ಇತಿಹಾಸದಲ್ಲಿ ನಿಮ್ಮ ಕಹಿ, ತಿರುಚಿದ ಸುಳ್ಳುಗಳಿಂದ ಬರೆಯಬಹುದು; ನನ್ನನ್ನು ಮಣ್ಣಿನಲ್ಲಿ ತುಳಿಯಬಹುದು; ಆದರೂ ಧೂಳಿನಂತೆ ನಾನು ಎದ್ದು ನಿಲ್ಲುತ್ತೇನೆ. ನಿಮ್ಮ ಮಾತುಗಳಿಂದ ನನ್ನ ಮೇಲೆ ದಾಳಿ ಮಾಡಬಹುದು, ನಿಮ್ಮ ಕಣ್ಣುಗಳಿಂದ ನನ್ನನ್ನು ಕತ್ತರಿಸಬಹುದು, ನಿಮ್ಮ ದ್ವೇಷದಿಂದ ನನ್ನನ್ನು ಕೊಲ್ಲಬಹುದು; ಆದರೂ ಗಾಳಿಯಂತೆ ನಾನು ಎದ್ದು ನಿಲ್ಲುತ್ತೇನೆ” ಎಂದು ಅವರು ಉಲ್ಲೇಖಿಸಿದ್ದಾರೆ.
2020ರ ಈಶಾನ್ಯ ದಿಲ್ಲಿ ಗಲಭೆಗಳ ಹಿಂದಿನ 'ಪಿತೂರಿ' ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನಿರಾಕರಿಸಿದೆ. ಇದೇ ಪ್ರಕರಣದಲ್ಲಿ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮುಹಮ್ಮದ್ ಸಲೀಮ್ ಖಾನ್ ಹಾಗೂ ಶಾದಾಬ್ ಅಹ್ಮದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.







