ನಂದಿಗ್ರಾಮದಲ್ಲಿ ಟಿಎಂಸಿ ಕಾರ್ಯಕರ್ತನ ಥಳಿಸಿ ಹತ್ಯೆ
ಬಿಜೆಪಿ ಕಾರ್ಯಕರ್ತರು ಹತ್ಯೆಗೈದಿದ್ದಾರೆ ಎಂದ ಟಿಎಂಸಿ

ಸಾಂದರ್ಭಿಕ ಚಿತ್ರ
ಕೋಲ್ಕತಾ: ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ನಂದಿಗ್ರಾಮದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಈ ಮೃತದೇಹ ಗೋಕುಲನಗರ್ ಪಂಚಾಯತ್ ಪ್ರದೇಶದ ನಂದಿಗ್ರಾಮ ಬ್ಲಾಕ್ 1ರ ನಿವಾಸಿ 52ರ ಹರೆಯದ ಮಹಾದೇಬ್ ಬಿಸೋಯಿಯದ್ದು ಎಂದು ಗುರುತಿಸಲಾಗಿದೆ. ಬೃಂದಾವನ್ ಚೌಕ್ನ ಮಾರುಕಟ್ಟೆ ಒಳಗೆ ಚಹಾದ ಅಂಗಡಿಯ ಎದುರು ಬುಧವಾರ ರಾತ್ರಿ ಮೃತದೇಹ ಪತ್ತೆಯಾಯಿತು ಎಂದು ಅವರು ಹೇಳಿದ್ದಾರೆ.
‘‘ಬಿಸೋಯಿಯನ್ನು ಥಳಿಸಿ ಹತ್ಯೆಗೈದಿರುವಂತೆ ಕಂಡು ಬಂದಿದೆ. ಅವರ ಎರಡೂ ಕಾಲುಗಳು ಮುರಿದಿವೆ. ಕೈಗಳಲ್ಲಿ ಗಾಯದ ಗುರುತುಗಳಿವೆ. ನಾವು ಅವರ ಕುಟುಂಬದಿಂದ ದೂರು ಸ್ವೀಕರಿಸಿದ್ದೇವೆ. ತನಿಖೆ ಆರಂಭಿಸಲಾಗಿದೆ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬಿಸೋಯಿಯನ್ನು ಬಿಜೆಪಿ ಕಾರ್ಯಕರ್ತರು ಹತ್ಯೆಗೈದಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ ಹಾಗೂ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದೆ.
‘‘ಬಿಸೋಯಿ ಪಕ್ಷದ ಸಕ್ರಿಯ ಕಾರ್ಯಕರ್ತ. ಬಿಜೆಪಿ ಬೆಂಬಲಿಗರು ಅವರನ್ನು ಹತ್ಯೆಗೈದಿದ್ದಾರೆ. ಕೆಲವು ದಿನಗಳ ಹಿಂದೆ ಪಕ್ಷದ ಇನ್ನೋರ್ವ ಕಾರ್ಯಕರ್ತನ ಹತ್ಯೆಯಾಗಿತ್ತು. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಾನು ಆಗ್ರಹಿಸುತ್ತೇನೆ’’ ಎಂದು ಟಿಎಂಸಿಯ ನಂದಿಗ್ರಾಮ್ ಬ್ಲಾಕ್ 1ರ ಅಧ್ಯಕ್ಷ ಬಪ್ಪಾದಿತ್ಯ ಗರ್ಗ್ ಹೇಳಿದ್ದಾರೆ.
ಟಿಎಂಸಿಯ ಪ್ರತಿಪಾದನೆಯನ್ನು ತಳ್ಳಿ ಹಾಕಿರುವ ಬಿಜೆಪಿ, ಟಿಎಂಸಿಯ ಒಳಗಡೆ ನಡೆದ ಜಗಳದಿಂದ ಬಿಸೋಯಿಯ ಹತ್ಯೆಯಾಗಿದೆ. ಇದರಲ್ಲಿ ಬಿಜೆಪಿಯ ಯಾವುದೇ ಕೈವಾಡ ಇಲ್ಲ ಎಂದಿದೆ.
‘‘ಇದರ ಹಿಂದೆ ಯಾವುದೇ ರಾಜಕೀಯ ದ್ವೇಷವಿಲ್ಲ. ನಿನ್ನೆ ಅವರು ಪಿಕ್ನಿಕ್ಗೆ ಹೋಗಿದ್ದಾರೆ. ಅಲ್ಲಿ ಮದ್ಯಸೇವಿಸಿದ್ದಾರೆ. ಬಳಿಕ ಜಗಳ ಮಾಡಿದ್ದಾರೆ. ಈ ಜಗಳದಲ್ಲಿ ಬಿಸೋಯಿನ್ನು ಹತ್ಯೆಗೈದಿದ್ದಾರೆ’’ ಎಂದು ಬಿಜೆಪಿಯ ತಾಮ್ಲೂಕ್ ಘಟಕದ ಪ್ರಧಾನ ಕಾರ್ಯದರ್ಶಿ ಮೇಘನಾಗ್ ಪೌಲ್ ಹೇಳಿದ್ದಾರೆ.







