ಇಷ್ಟವಿದ್ದರೆ ಪಕ್ಷದಲ್ಲಿರುತ್ತೇನೆ, ತೆಲೆಗೆ ಗನ್ ಇಟ್ಟು ಉಳಿಸಿಕೊಳ್ಳಲು ಸಾಧ್ಯವಿಲ್ಲ : ಅಣ್ಣಾಮಲೈ

ಕೆ. ಅಣ್ಣಾಮಲೈ | Photo Credit : PTI
ಕೊಯಂಬತ್ತೂರು: ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೊಸ ಪಕ್ಷ ಆರಂಭಿಸುವುದಾಗಿ ಹರಿದಾಡುತ್ತಿರುವ ವದಂತಿಗಳನ್ನು ತಳ್ಳಿಹಾಕಿದ್ದು, ಪಕ್ಷದೊಳಗಿನ ಕೆಲವು ವಿಚಾರಗಳಲ್ಲಿ ತಾನೂ ಅಸಮಾಧಾನಗೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಕೊಯಂಬತ್ತೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಾನು ಇಷ್ಟಪಟ್ಟರೆ ಪಕ್ಷದಲ್ಲಿರುತ್ತೇನೆ, ಬೇಡವೆನಿಸಿದರೆ ಬಿಡಿ, ಕೃಷಿ ಮಾಡುತ್ತೇನೆ. ರಾಜಕೀಯ ಸ್ವಯಂಪ್ರೇರಿತ ಕ್ಷೇತ್ರ. ಇಲ್ಲಿ ನಮ್ಮ ಹಣವನ್ನೇ ನಾವು ಖರ್ಚು ಮಾಡುತ್ತೇವೆ. ತಲೆಯ ಮೇಲೆ ಬಂದೂಕು ಹಿಡಿದು ಯಾರನ್ನೂ ಉಳಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
“ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಸ್ವಚ್ಛ ರಾಜಕೀಯವನ್ನು ತರುವರು ಎಂಬ ವಿಶ್ವಾಸವೇ ಬಿಜೆಪಿಗೆ ಸೇರಲು ಕಾರಣ. ಆ ನಂಬಿಕೆ ಇಲ್ಲದಿದ್ದರೆ ಉದ್ಯೋಗ ಬಿಟ್ಟು ರಾಜಕೀಯಕ್ಕೆ ಬರಬೇಕಾದ ಅಗತ್ಯವಿರಲಿಲ್ಲ,” ಎಂದು ಅಣ್ಣಾಮಲೈ ಹೇಳಿದರು.
“ನಾನು ರಾಜಕೀಯ ಹಿನ್ನೆಲೆಯಿಲ್ಲದ ಕೃಷಿಕ ಕುಟುಂಬದಿಂದ ಬಂದವನು. ನನ್ನ ಮಿತಿಗಳು ನನಗೆ ಗೊತ್ತು. ಹೊಸ ಪಕ್ಷ ಪ್ರಾರಂಭಿಸುವ ಪ್ರಶ್ನೆಯೇ ಇಲ್ಲ,” ಎಂದು ಹೊಸ ಪಕ್ಷ ಪ್ರಾರಂಭಿಸುವ ವದಂತಿಗಳಿಗೆ ಅವರು ತೆರೆ ಎಳೆದರು.
“ಕೆಲವೊಮ್ಮೆ ಕೇಳಿಸಿಕೊಂಡು ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಮಾತಾಡಬೇಕಾಗುತ್ತದೆ. ಆದರೂ, ಕೆಲವು ವಿಷಯಗಳನ್ನು ಸಹಿಸಲು ಸಾಧ್ಯವಿಲ್ಲ. ಕಾದು ನೋಡೋಣ. ಒಳ್ಳೆಯದು ಸಂಭವಿಸುತ್ತದೆ”, ಎಂದು ಪಕ್ಷದೊಳಗಿನ ಕೆಲವು ನಿಲುವುಗಳ ಬಗ್ಗೆ ಅಣ್ಣಾಮಲೈ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ತಮಗೆ ವಿರುದ್ಧವಾಗಿ ಕೆಲ ಎಐಎಡಿಎಂಕೆ ನಾಯಕರು ವೈಯಕ್ತಿಕ ದಾಳಿ ನಡೆಸುತ್ತಿರುವುದಾಗಿ ಆರೋಪಿಸಿದ ಅವರು, “ಅಮಿತ್ ಶಾಗೆ ನೀಡಿದ ಮಾತಿನ ಕಾರಣ ಮೌನವಾಗಿದ್ದೇನೆ. ಪ್ರತಿಕ್ರಿಯಿಸಲು ಎರಡು ನಿಮಿಷವೂ ಸಾಕು. ಆದರೆ ಎಲ್ಲರಿಗೂ ಲಕ್ಷ್ಮಣರೇಖೆ ಇದೆ. ಸಮಯ ಬಂದಾಗ ಮಾತನಾಡುತ್ತೇನೆ,” ಎಂದು ಎಚ್ಚರಿಕೆ ನೀಡಿದರು.
“ಪಸುಂಪನ್ ಮುತ್ತುರಾಮಲಿಂಗ ತೇವರ್ ಗುರುಪೂಜೆಯಲ್ಲಿ ಗುರುವಾರ ನಾವು ಹಲವಾರು ರಾಜಕೀಯ ಚಲನವಲನ ನೋಡಿದ್ದೇವೆ. ಬಿಜೆಪಿಯ ಕಾರ್ಯಕರ್ತನಾಗಿ ನಾನು ಕಾಯುತ್ತಿದ್ದೇನೆ ಮತ್ತು ವೀಕ್ಷಿಸುತ್ತಿದ್ದೇನೆ" ಎಂದು ಎಐಎಡಿಎಂಕೆ ಹಿರಿಯ ನಾಯಕ ಕೆ.ಎ. ಸೆಂಗೋಟ್ಟಯ್ಯನ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವ ಇತ್ತೀಚಿನ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ಎಲ್ಲಾ ಬಿಜೆಪಿ ಸದಸ್ಯರ ಗುರಿಯಾಗಿದೆ ಎಂದು ಅಣ್ಣಾಮಲೈ ಹೇಳಿದರು.
ಪಸುಂಪನ್ನಲ್ಲಿ ಮುತ್ತುರಾಮಲಿಂಗ ತೇವರ್ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಓ ಪನ್ನೀರ್ಸೆಲ್ವಂ, ಟಿಟಿವಿ ದಿನಕರನ್ ಮತ್ತು ಶಶಿಕಲಾ ಸೇರಿದಂತೆ ಇತರ ಎಐಎಡಿಎಂಕೆ ಮಾಜಿ ಹಿರಿಯ ನಾಯಕರನ್ನು ಭೇಟಿಯಾದ ಒಂದು ದಿನದ ನಂತರ, ಅಕ್ಟೋಬರ್ 31 ರಂದು ಸೆಂಗೊಟ್ಟೈಯನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು.







