ಸೇತುವೆ, ಸುರಂಗಗಳಿಂದ ಕೂಡಿದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳು ಶೇ.50ರವರೆಗೆ ಇಳಿಕೆ

Photo Credit: The Hindu
ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಂಗಗಳು, ಸೇತುವೆಗಳು, ಫ್ಲೈ ಓವರ್ಗಳು ಮತ್ತು ಎತ್ತರಿಸಿದ ಕಾರಿಡಾರ್ ಗಳನ್ನು ಒಳಗೊಂಡಿರುವ ವಿಭಾಗಗಳಲ್ಲಿ ಟೋಲ್ ದರಗಳಲ್ಲಿ ಶೇ.50ರವರೆಗೆ ಗಮನಾರ್ಹ ಕಡಿತವನ್ನು ಸರಕಾರವು ಪ್ರಕಟಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ(ದರಗಳ ನಿರ್ಧಾರ ಮತ್ತು ಸಂಗ್ರಹ) ನಿಯಮಗಳು, 2008ಕ್ಕೆ ತಿದ್ದುಪಡಿಯನ್ನು ತಂದಿದ್ದು, ಟೋಲ್ ದರಗಳ ಲೆಕ್ಕಾಚಾರದಲ್ಲಿ ಪರಿಷ್ಕೃತ ಸೂತ್ರವನ್ನು ಪರಿಚಯಿಸಿದೆ. ಈ ಬದಲಾವಣೆಗಳನ್ನು ಜು.2ರಂದು ಅಧಿಸೂಚಿಸಲಾಗಿದೆ.
ನೂತನ ನಿಯಮಗಳ ಪ್ರಕಾರ 1)ಹೆದ್ದಾರಿ ವಿಭಾಗವೊಂದರಲ್ಲಿಯ ಸುರಂಗಗಳು ಮತ್ತು ಸೇತುವೆಗಳಂತಹ ರಚನೆಯ ಉದ್ದದ ಹತ್ತು ಪಟ್ಟು ಶುಲ್ಕದ ಜೊತೆಗೆ ಅಂತಹ ರಚನೆಗಳಿಲ್ಲದ ಉಳಿದ ಹೆದ್ದಾರಿಯ ಸಾಮಾನ್ಯ ಶುಲ್ಕ ಅಥವಾ 2)ರಚನೆಗಳು ಸೇರಿದಂತೆ ಹೆದ್ದಾರಿ ವಿಭಾಗದ ಒಟ್ಟು ಉದ್ದದ ಐದು ಪಟ್ಟು ಶುಲ್ಕ, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ವಿಧಿಸಲಾಗುವುದು.
ಸಚಿವಾಲಯವು ನಿದರ್ಶನವಾಗಿ ಸಂಪೂರ್ಣವಾಗಿ ಸುರಂಗಗಳು, ಸೇತುವೆಗಳು, ಫ್ಲೈಓವರ್ಗಳು ಮತ್ತು ಎತ್ತರಿಸಿದ ಕಾರಿಡಾರ್ಗಳಂತಹ ರಚನೆಗಳನ್ನು ಒಳಗೊಂಡಿರುವ 40 ಕಿ.ಮೀ.ಉದ್ದದ ರಾಷ್ಟ್ರೀಯ ಹೆದ್ದಾರಿ ವಿಭಾಗವನ್ನು ಉಲ್ಲೇಖಿಸಿದೆ. ಹಳೆಯ ವ್ಯವಸ್ಥೆಯಡಿ ಇದಕ್ಕೆ 400 ಕಿ.ಮೀ.(10 x40)ಗಳಿಗೆ ಶುಲ್ಕವನ್ನು ವಿಧಿಸಲಾಗುತ್ತಿತ್ತು. ನೂತನ ಸೂತ್ರದಡಿ ಶುಲ್ಕವನ್ನು 200 ಕಿ.ಮೀ.(5 x40 ಕಿ.ಮೀ.) ಗಳಿಗೆ ಲೆಕ್ಕ ಹಾಕಲಾಗುತ್ತದೆ. ತನ್ಮೂಲಕ ವಾಹನಗಳು ಪಾವತಿಸುವ ಟೋಲ್ ಶುಲ್ಕಗಳು ಶೇ.50ಕ್ಕೆ ಇಳಿಕೆಯಾಗಲಿವೆ.
ಪ್ರಸ್ತುತ ಈ ಸಂಕೀರ್ಣ ಮೂಲಸೌಕರ್ಯಗಳ ಹೆಚ್ಚಿನ ನಿರ್ಮಾಣ ಮತ್ತು ನಿರ್ವಹಣೆ ವೆಚ್ಚಗಳಿಂದಾಗಿ ಇಂತಹ ರಚನೆಗಳ ಪ್ರತಿ ಕಿ.ಮೀ.ಗೆ ಸಾಮಾನ್ಯ ಶುಲ್ಕಕ್ಕಿಂತ ಹತ್ತು ಪಟ್ಟು ಶುಲ್ಕವನ್ನು ವಿಧಿಸಲಾಗುತ್ತಿದೆ.
ದರ ಪರಿಷ್ಕರಣೆಯನ್ನು ದೃಢಪಡಿಸಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೋರ್ವರು, ಮೂಲಸೌಕರ್ಯ ನಿರ್ಮಾಣ ವೆಚ್ಚ ವಸೂಲಿ ಮತ್ತು ಕೈಗೆಟಕುವ ದರಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಟೋಲ್ ಸಂಗ್ರಹವನ್ನು ತರ್ಕಬದ್ಧಗೊಳಿಸುವ ಮತ್ತು ರಸ್ತೆ ಬಳಕೆದಾರರಿಗೆ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಈ ಪರಿಷ್ಕರಣೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ಈ ಪರಿಷ್ಕರಣೆಯು ಗಮನಾರ್ಹ ರಚನೆಗಳನ್ನು ಒಳಗೊಂಡಿರುವ ಪ್ರಮುಖ ಹೆದ್ದಾರಿಗಳಲ್ಲಿ ಒಟ್ಟಾರೆ ಪ್ರಯಾಣ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ರಾಷ್ಟ್ರೀಯ ಹೆದ್ದಾರಿ ಜಾಲದ ಹೆಚ್ಚಿನ ಬಳಕೆಯನ್ನು ಉತ್ತೇಜಿಸುತ್ತದೆ ಎಂದು ನಿರಿಕ್ಷಿಸಲಾಗಿದೆ.