ಗಗನಕ್ಕೇರಿದ ಟೊಮೆಟೊ ಬೆಲೆ; ಮನೆಯೂಟ ಕೂಡಾ ದುಬಾರಿ; ವರದಿ

PC : PTI
ಮುಂಬೈ: ಜೂನ್ ತಿಂಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದರಿಂದ ಮನೆಯೂಟ ಅಥವಾ ಥಾಲಿಯ ದರವೂ ದುಬಾರಿಯಾಗಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ವರದಿಯೊಂದರಲ್ಲಿ ಹೇಳಲಾಗಿದೆ.
ಈ ವರದಿಯ ಪ್ರಕಾರ, ಮೇ ತಿಂಗಳಲ್ಲಿ ಮನೆಯಲ್ಲಿ ತಯಾರಿಸುವ ಪ್ರತಿ ಸಸ್ಯಾಹಾರಿ ಥಾಲಿಯ ಬೆಲೆ 26.2 ರೂ. ಇದ್ದದ್ದು, ಜೂನ್ ತಿಂಗಳಲ್ಲಿ 27.1 ರೂ.ಗೆ ಏರಿಕೆಯಾಗಿದೆ. ಇದೇ ವೇಳೆ, ಪ್ರತಿ ಮಾಂಸಾಹಾರಿ ಥಾಲಿಯ ಬೆಲೆ 52.6 ರೂ. ಇದ್ದದ್ದು, ಶೇ. 4ರಷ್ಟು ಏರಿಕೆಯಾಗಿ, ಜೂನ್ ತಿಂಗಳಲ್ಲಿ 54.8 ರೂ.ಗೆ ತಲುಪಿದೆ.
ಗೃಹಬಳಕೆ ಶ್ರೇಣೀಕರಣ ಸಂಸ್ಥೆಯಾದ ಕ್ರಿಸಿಲ್ ನ ಅಂಗ ಸಂಸ್ಥೆಯೊಂದು ನೀಡಿರುವ ಮಾಸಿಕ 'ರೋಟಿ, ರೈಸ್, ರೇಟ್'ನ ವರದಿಯ ಪ್ರಕಾರ, ಜೂನ್ ತಿಂಗಳಲ್ಲಿ ಟೊಮೆಟೊ ಆವಕ ಶೇ. 8ರಷ್ಟು ಇಳಿಕೆಯಾದ ಪರಿಣಾಮ, ಟೊಮೆಟೊ ದರದಲ್ಲಿ ಶೇ. 36ರಷ್ಟು ಏರಿಕೆಯಾಗಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಥಾಲಿಗಳ ಬೆಲೆಯಲ್ಲೂ ಏರಿಕೆಯಾಗಿದೆ ಎನ್ನಲಾಗಿದೆ.
ಇದರೊಂದಿಗೆ, ಆಲೂಗಡ್ಡೆ ಬೆಲೆಯಲ್ಲಿ ಶೇ. 4ರಷ್ಟು ಏರಿಕೆಯಾಗಿರುವುದರಿಂದ, ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ ಎಂದೂ ಈ ವರದಿಯಲ್ಲಿ ಹೇಳಲಾಗಿದೆ.
ಮಾಂಸಾಹಾರಿ ಥಾಲಿಗೆ ಸಂಬಂಧಿಸಿದಂತೆ, ಬ್ರಾಯ್ಲರ್ ಕೋಳಿಯ ಬೆಲೆಯಲ್ಲಿ ಶೇ. 5ರಷ್ಟು ಏರಿಕೆಯಾಗಿರುವುದರಿಂದಲೂ, ಗ್ರಾಹಕನಿಗೆ ಮಾಂಸಾಹಾರಿ ಥಾಲಿಯ ಬೆಲೆ ಮತ್ತಷ್ಟು ದುಬಾರಿಯಾಗಿ ಪರಿಣಮಿಸಿದೆ ಎಂದೂ ಈ ವರದಿಯಲ್ಲಿ ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕ್ರಿಸಿಲ್ ಇಂಟಲಿಜೆನ್ಸ್ ನಿರ್ದೇಶಕ ಪುಷನ್ ಶರ್ಮ, ಋತುಮಾನ ಬದಲಾದಂತೆ, ತರಕಾರಿಗಳ ಬೆಲೆಯಲ್ಲೂ ಏರಿಕೆಯಾಗಲಿದ್ದು, ಇದರಿಂದ ಥಾಲಿಗಳ ಬೆಲೆಯಲ್ಲೂ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.







