ಟ್ರಾಯ್ ಮಾರ್ಗಸೂಚಿ | 458 ರೂ, 1,958 ರೂ. ವಾಯ್ಸ್ ಮತ್ತು ಎಸ್ಎಂಎಸ್ ಪ್ಲಾನ್ ಬಿಡುಗಡೆಗೊಳಿಸಿದ ರಿಲಯನ್ಸ್ ಜಿಯೊ

ರಿಲಯನ್ಸ್ ಜಿಯೊ | PC : PTI
ಹೊಸದಿಲ್ಲಿ: ಮೊಬೈಲ್ ಸೇವಾ ಸಂಸ್ಥೆಗಳ ಕಾಂಬೊ ಪ್ಲಾನ್ ಗಳಿಗೆ ಇತ್ತೀಚೆಗೆ ಅಂಕುಶ ಹಾಕಿದ್ದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಕರೆ ಮತ್ತು ಸಂದೇಶದ ಪ್ರತ್ಯೇಕ ಪ್ಲಾನ್ ಗಳನ್ನು ಬಿಡುಗಡೆ ಮಾಡಬೇಕು ಎಂದು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಈ ಮಾರ್ಗಸೂಚಿಗಳ ಪಾಲನೆಯತ್ತ ಹೆಜ್ಜೆ ಇಟ್ಟಿರುವ ಭಾರತದ ಮುಂಚೂಣಿ ಮೊಬೈಲ್ ಸೇವಾ ಸಂಸ್ಥೆಯಾದ ರಿಲಯನ್ಸ್ ಜಿಯೊ, 458 ರೂ. ಹಾಗೂ 1,958 ರೂ.ಮೊತ್ತದ ವಾಯ್ಸ್ ಮತ್ತು ಎಸ್ಎಂಎಸ್ ಪ್ಲಾನ್ ಅನ್ನು ಬಿಡುಗಡೆಗೊಳಿಸಿದೆ.
ಭಾರ್ತಿ ಏರ್ ಟೆಲ್ ವಾಯ್ಸ್ ಕಾಲ್ಸ್ ಹಾಗೂ ಎಸ್ಎಂಎಸ್ ಪ್ಲಾನ್ ಗಳ ವಿಶೇಷ ದರಗಳನ್ನು ಪ್ರಕಟಿಸಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ಆದರೆ, ರಿಲಯನ್ಸ್ ಜಿಯೊ ಸಂಸ್ಥೆಯ ದರವು ತನ್ನ ಪ್ರತಿಸ್ಪರ್ಧಿ ಸಂಸ್ಥೆಯ ದರಕ್ಕಿಂತ ಕೊಂಚ ಕಡಿಮೆ ಇದೆ. ಟ್ರಾಯ್ ನ ನೂತನ ಮಾರ್ಗಸೂಚಿಯಿಂದ ಯಾವ ಗ್ರಾಹಕರಿಗೆ ಇಂಟರ್ ನೆಟ್ ಸಂಪರ್ಕದ ಅಗತ್ಯವಿಲ್ಲವೊ, ಅಂತಹ ಗ್ರಾಹಕರಿಗೆ ಲಾಭವಾಗಲಿದೆ. ಇದರಿಂದ ವಾಯ್ಸ್ ಮತ್ತು ಎಸ್ಎಂಎಸ್ ಪ್ಯಾಕ್ ಗಳು ಅಗ್ಗವಾಗಲಿವೆ.
ರಿಲಯನ್ಸ್ ಜಿಯೊ ಪರಿಚಯಿಸಿರುವ ನೂತನ ಪ್ಲಾನ್ ಗಳನ್ನು ಅದರ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಅತ್ಯಂತ ಅಗ್ಗದ ದರ 458 ರೂ. ಆಗಿದ್ದು, ಈ ಪ್ಲಾನ್ 84 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಲಾನ್ ನಲ್ಲಿ ಅನಿಯಮಿತ ಕರೆಗಳು ಹಾಗೂ 1000 ಸಂದೇಶಗಳನ್ನು ರವಾನಿಸುವ ಅವಕಾಶ ಲಭ್ಯವಿರಲಿದೆ.
ಎರಡನೆ ಪ್ಲಾನ್ ದರ 1,958 ರೂ. ಆಗಿದ್ದು, ಈ ಪ್ಲಾನ್ ನ ಮಾನ್ಯತೆ 365 ದಿನಗಳಾಗಿವೆ. ಈ ಪ್ಲಾನ್ ನಲ್ಲಿ ಅನಿಯಮಿತ ಕರೆಗಳೊಂದಿಗೆ 3,600 ಸಂದೇಶಗಳನ್ನು ರವಾನಿಸುವ ಅವಕಾಶ ಲಭ್ಯವಾಗಲಿದೆ. ಈ ಎರಡೂ ಪ್ಲಾನ್ ಗಳು ಜಿಯೊ ಟಿವಿ, ಜಿಯೊ ಕ್ಲೌಡ್ ಹಾಗೂ ಜಿಯೊ ಸಿನಿಮಾಗೆ (ಪ್ರೀಮಿಯಂ ಅನ್ನು ಸೇರ್ಪಡೆ ಮಾಡಲಾಗಿಲ್ಲ) ಪ್ರವೇಶ ಹೊಂದಿರಲಿವೆ.
ಮೊದಲೇ ಹೇಳಿದಂತೆ ಮೂಲ ಪ್ಲಾನ್ ಏರ್ ಟೆಲ್ ಗಿಂತ ಅಗ್ಗವಾಗಿದ್ದು, 84 ದಿನಗಳಿಗೆ 499 ರೂ. ದರ ಹೊಂದಿದೆ.
ಈ ಬದಲಾವಣೆಗಳಿಗೂ ಮುನ್ನ, ರಿಲಯನ್ಸ್ ಜಿಯೊ ಮೌಲ್ಯದ ವರ್ಗದಲ್ಲಿ ಮೂರು ಪ್ಲಾನ್ ಗಳ ಆಹ್ವಾನ ನೀಡಿತ್ತು. 479 ರೂ. ಪ್ಲಾನ್ 84 ದಿನಗಳ ಕಾಲ 6 ಜಿಬಿ ಡಾಟಾವನ್ನು ಹೊಂದಿತ್ತು. ಡಾಟಾ ಸೌಲಭ್ಯವನ್ನು ತೆಗೆದು ಹಾಕುವುದರಿಂದ ಈ ಪ್ಲಾನ್ 21 ರೂ.ನಷ್ಟು ಅಗ್ಗವಾಗಲಿದ್ದು, ಉಳಿದ ಲಾಭಗಳು ಹಾಗೆ ಉಳಿಯಲಿವೆ. ಮೌಲ್ಯದ ಕೊಡುಗೆಯೊಂದಿಗೆ ರಿಲಯನ್ಸ್ ಜಿಯೊ ಸಂಸ್ಥೆಯೇನಾದರೂ ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡಲಿದೆಯೆ ಎಂಬುದನ್ನು ಕಾದು ನೋಡಬೇಕಿದೆ.
ನಿನ್ನೆ 539 ರೂ. ಪ್ಲಾನ್ 6 ಜಿಬಿ ಒಟ್ಟು ದತ್ತಾಂಶದೊಂದಿಗೆ 84 ದಿನಗಳ ಮಾನ್ಯತೆ ಹೊಂದಿರಲಿದೆ ಎಂದು ವರದಿಯಾಗಿತ್ತು. ಹಾಲಿ ಅಸ್ತಿತ್ವದಲ್ಲಿರುವ 1,899 ರೂ. ಪ್ಲಾನ್ ಸದ್ಯ ವೆಬ್ ಸೈಟ್ ನಿಂದ ಕಣ್ಮರೆಯಾಗಿದ್ದು, ಈ ಪ್ಲಾನ್ ಅನ್ನು 2,249 ರೂ. ಗೆ ಏರಿಕೆ ಮಾಡಿ, ಮಾನ್ಯತೆಯನ್ನು 336 ದಿನಗಳಿಗೆ ಹಾಗೂ ಒಟ್ಟು ದತ್ತಾಂಶವನ್ನು 24 ಜಿಬಿಗಳಿಗೆ ಏರಿಕೆ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ. ಆದರೆ, ಈ ಕುರಿತು ಈವರೆಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಮಾಡಲಾಗಿಲ್ಲ.
ಇಲ್ಲಿಯವರೆಗೆ 14 ದಿನಗಳ ಅವಧಿಗೆ ಪ್ರತಿ ದಿನ 2 ಜಿಬಿ ದತ್ತಾಂಶವನ್ನು 198 ರೂ. ದರಕ್ಕೆ ನೀಡುವುದೇ ರಿಲಯನ್ಸ್ ಜಿಯೊ ಸಂಸ್ಥೆಯ ಅಗ್ಗದ ಪ್ರೀಪೇಯ್ಡ್ ಪ್ಲಾನ್ ಆಗಿತ್ತು. ಈ ಹಿಂದಿನ ಪ್ಯಾಕ್ ಆಗಿದ್ದ 199 ರೂ. ಗಳಿಗೆ ಪ್ರತಿ ದಿನ 2 ಜಿಬಿ ಡಾಟಾವನ್ನು 28 ದಿನಗಳ ಅವಧಿಗೆ ನೀಡುವ ಪ್ಲಾನ್ ಅನ್ನು ಹಾಲಿ ಚಂದಾದಾರರಿಗೆ 299 ರೂ.ಗೆ ಏರಿಕೆ ಮಾಡಲಾಗಿದೆ. ಆದರೆ, ಹೊಸ ಚಂದಾದಾರರಿಗೆ ಈ ಪ್ಲಾನ್ ನ ಮೊತ್ತವನ್ನು 349 ರೂ.ಗೆ ಏರಿಕೆ ಮಾಡಲಾಗಿದೆ.







