ವಿಚಾರಣಾ ನ್ಯಾಯಾಲಯಗಳು ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗುತ್ತಿವೆ: ಮಧ್ಯಪ್ರದೇಶ ಹೈಕೋರ್ಟ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ವಿಚಾರಣಾ ನ್ಯಾಯಾಲಯಗಳು ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗುತ್ತಿವೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಗಮನಿಸಿದೆ.
ಪೋಕ್ಸೋ ಪ್ರಕರಣವೊಂದರಲ್ಲಿ ವಿಚಾರಣಾ ನ್ಯಾಯಾಲಯ ಹಲವು ತಪ್ಪುಗಳನ್ನು ಮಾಡಿದೆ ಎಂದು ಗಮನಿಸಿದ ಮಧ್ಯಪ್ರದೇಶ ಹೈಕೋರ್ಟ್, ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿದೆ.
ವಿಚಾರಣಾ ನ್ಯಾಯಾಲಯ 'ದಾಖಲೆಯಲ್ಲಿದ್ದ ಎಲುಬಿನ (ಆಸಿಫಿಕೇಶನ್) ಪರೀಕ್ಷಾ ವರದಿಯನ್ನು ಗಣನೆಗೆ ತೆಗೆದುಕೊಂಡಿಲ್ಲ ಮತ್ತು ಡಿಎನ್ಎ ವರದಿಯ ಆಧಾರದ ಮೇಲೆ ಆರೋಪಿಗೆ ಮತ್ತು ಅರ್ಜಿದಾರರಿಗೆ ಸಿಆರ್ಪಿಸಿಯ ಸೆಕ್ಷನ್ 313ರ ಅಡಿಯಲ್ಲಿ ವಿಚಾರಣೆ ನಡೆಸಿಲ್ಲʼ ಎಂದು ನ್ಯಾಯಾಲಯ ಗಮನಿಸಿದೆ.
ಮಧ್ಯಪ್ರದೇಶದ ನ್ಯಾಯಾಂಗ ಅಕಾಡೆಮಿಯಲ್ಲಿ ನಿಯಮಿತ ತರಬೇತಿಯ ಹೊರತಾಗಿಯೂ, ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ನಿರಂತರವಾಗಿ ವಿಫಲವಾಗುತ್ತಿದ್ದಾರೆ ಎಂದು ವಿಚಾರಣಾ ನ್ಯಾಯಾಲಯವನ್ನು ಮಧ್ಯಪ್ರದೇಶ ಹೈಕೋರ್ಟ್ ಪೀಠವು ಟೀಕಿಸಿದೆ.
ಪೋಕ್ಸೊ ಪ್ರಕರಣದಲ್ಲಿ ವಿಶೇಷ ನ್ಯಾಯಾಧೀಶರು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ವ್ಯಕ್ತಿಯೋರ್ವರು ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್ ಈ ಮಹತ್ವದ ಅವಲೋಕನವನ್ನು ಮಾಡಿದೆ.







