ತ್ರಿಪುರಾ: ಬಿಎಸ್ಎಫ್ನಿಂದ 14 ಬಾಂಗ್ಲಾದೇಶಿಗಳ ಬಂಧನ

ಸಾಂದರ್ಭಿಕ ಚಿತ್ರ | PC : PTI
ಅಗರ್ತಲ: ಗಡಿ ರಕ್ಷಣಾ ಪಡೆ (ಬಿಎಸ್ಎಫ್) ಕಳೆದ ಒಂದು ವಾರದಿಂದ ನಡೆಸುತ್ತಿರುವ ಸರಣಿ ಶೋಧ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶದ 14 ಮಂದಿ ಪ್ರಜೆಗಳು ಹಾಗೂ ಇಬ್ಬರು ಭಾರತೀಯ ದಲ್ಲಾಳಿಗಳನ್ನು ಬಂಧಿಸಿದೆ. ಅಲ್ಲದೆ, ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಣ್ಗಾವಲನ್ನು ಹೆಚ್ಚಿಸಿದೆ.
‘‘ವಿವಿಧ ಸ್ವತಂತ್ರ್ಯ ಹಾಗೂ ಜಂಟಿ ಕಾರ್ಯಾಚರಣೆಯಲ್ಲಿ ಬಿಎಸ್ಎಫ್ ಬಾಂಗ್ಲಾದೇಶದ 14 ಪ್ರಜೆಗಳು ಹಾಗೂ ಇಬ್ಬರು ಭಾರತೀಯ ದಲ್ಲಾಳಿಗಳನ್ನು ಬಂಧಿಸಿದೆ. ಅಲ್ಲದೆ, ಅವರಿಂದ 2.5 ಕೋ.ರೂ. ಮೌಲ್ಯದ ಭಾರೀ ಪ್ರಮಾಣದ ಮಾದಕ ವಸ್ತು, ಸಕ್ಕರೆ, ಜಾನುವಾರು ಹಾಗೂ ಇತರ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ’’ ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಈ ವರ್ಷ ಜನವರಿ 26ರಿಂದ ಬಿಎಸ್ಎಫ್ ಗಡಿಯಾಚೆಗಿನ ಹಲವು ಅಕ್ರಮ ಸಾಗಾಟ ದಂಧೆ, ನಕಲಿ ಪಾಸ್ಪೋರ್ಟ್ ದಂಧೆ, ಒಳನುಸುಳುವಿಕೆ ಹಾಗೂ ಹೊರ ನುಸುಳುವಿಕೆಯನ್ನು ಬೇಧಿಸಿದೆ. ತ್ರಿಪುರಾದಲ್ಲಿರುವ ಭಾರತ-ಬಾಂಗ್ಲಾದೇಶ ಅಂತರ ರಾಷ್ಟ್ರೀಯ ಗಡಿಯಲ್ಲಿ ಮಾದಕ ದ್ರವ್ಯ ಅಕ್ರಮ ಸಾಗಾಟ, ಮಾನವ ಸಾಗಾಟ, ಜಾನುವಾರು ಅಕ್ರಮ ಸಾಗಾಟ ಹಾಗೂ ಇತರ ಮಾದಕ ವಸ್ತುಗಳ ಅಕ್ರಮ ಸಾಗಾಟ ನಡೆಯುತ್ತಿದೆ. ಇತ್ತೀಚೆಗೆ ಸಕ್ಕರೆಯ ಅಕ್ರಮ ಸಾಗಾಟ ಹೆಚ್ಚುತ್ತಿದೆ ಎಂದು ಅವರು ತಿಳಿಸಿದ್ದಾರೆ
ಬಿಎಸ್ಎಫ್ ಯೋಧರ ಮೇಲೆ ಹಲ್ಲೆ ಸೇರಿದಂತೆ ಇತ್ತೀಚೆಗೆ ಸಕ್ಕರೆ ಅಕ್ರಮ ಸಾಗಾಟಗಾರರೊಂದಿಗೆ ಘರ್ಷಣೆ ಸಂಭವಿಸಿದ ಹಿನ್ನೆಲೆಯಲ್ಲಿ ತ್ರಿಪುರಾ ಅಂತರ ರಾಷ್ಟ್ರೀಯ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







