ತ್ರಿಪುರಾ | ಹಿಂಸಾಚಾರಕ್ಕೆ ತಿರುಗಿದ ಬಂದ್ : ಮೂವರು ಸರಕಾರಿ ಅಧಿಕಾರಿಗಳ ಸಹಿತ 10 ಮಂದಿಗೆ ಗಾಯ

Photo Credit : PTI
ಅಗರ್ತಲಾ, ಅ. 24: ನೂತನ ಸಂಘಟನೆಯೊಂದು ಕರೆ ನೀಡಿದ ಬಂದ್ ತ್ರಿಪುರಾದ ಧಲಾಯಿ ಜಿಲ್ಲೆಯಲ್ಲಿ ಗುರುವಾರ ಸಂಜೆ ಹಿಂಸಾಚಾರಕ್ಕೆ ತಿರುಗಿದ್ದು, ಮೂವರು ಸರಕಾರಿ ಅಧಿಕಾರಿಗಳು ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ನಿಷೇಧಾಜ್ಞೆ ಜಾರಿಗೊಳಿಸಿದೆ.
ತ್ರಿಪಕ್ಷೀಯ ಒಪ್ಪಂದ ಅನುಷ್ಠಾನ, ಅಕ್ರಮ ವಲಸಿಗರ ಪತ್ತೆ ಹಾಗೂ ಪ್ರತಿ ಜಿಲ್ಲೆಗಳಲ್ಲಿ ಬಂಧನ ಶಿಬಿರಗಳನ್ನು ಆರಂಭಿಸುವಂತೆ ಆಗ್ರಹಿಸಿ ‘ತ್ರಿಪುರಾ ಸಿವಿಲ್ ಸೊಸೈಟಿ’ 24 ಗಂಟೆಗಳ ಬಂದ್ಗೆ ಕರೆ ನೀಡಿತ್ತು.
ಧಲಾಯಿಯ ಕಮಲಾಪುರ ಉಪ ವಿಭಾಗದ ಶಾಂತಿನಗರ ಮಾರುಕಟ್ಟೆಯಲ್ಲಿ ಅಂಗಡಿ ಮಾಲಕರು ಸಂಜೆ ಸುಮಾರು 6 ಗಂಟೆಗೆ ಅಂಗಡಿಗಳನ್ನು ತೆರೆದಾಗ ಹಿಂಸಾಚಾರ ಆರಂಭವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘‘ಬಂದ್ ವೇಳೆ ಕೆಲವರು ದೊಣ್ಣೆಯಿಂದ ಅಂಗಡಿ ಮಾಲಕರು ಹಾಗೂ ಗ್ರಾಮಸ್ಥರ ಮೇಲೆ ದಾಳಿ ನಡೆಸಿದರು. ಕಲ್ಲು ತೂರಾಟ ನಡೆಸಿದರು. ಇದರ ಪರಿಣಾಮ ಕಾರ್ಯಕಾರಿ ದಂಡಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಲೇಮಾ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಅಭಿಜಿತ್ ಮುಜುಂದಾರ್ ಸೇರಿದಂತೆ 10 ಮಂದಿ ಗಾಯಗೊಂಡರು’’ ಎಂದು ತ್ರಿಪುರಾ ಪೊಲೀಸ್ ವಕ್ತಾರ ರಾಜ್ದೀಪ್ ದೇಬ್ ಹೇಳಿದ್ದಾರೆ.
ಕಮಲಾಪುರ ಎಸ್ಡಿಪಿಒ ಸಮುದ್ರ ದೇಬಬರ್ಮಾ ಹಾಗೂ ಸಲೇಮಾ ಬ್ಲಾಕ್ನ ಸರಕಾರಿ ಎಂಜಿನಿಯರ್ ಅನಿಮೇಶ್ ಸಹಾ ಕೂಡ ಗಾಯಗೊಂಡರು. ಮೂವರು ಅಧಿಕಾರಿಗಳ ಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಅಗರ್ತಲಾ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಎಜಿಎಂಸಿ) ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಗಾಯಗೊಂಡ ಇತರರನ್ನು ಕಮಲಾಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದುಕೊಂಡ ಬಳಿಕ ಅವರು ಬಿಡುಗಡೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪರಿಸ್ಥಿತಿ ಉದ್ವಿಗ್ನವಾಗಿದೆ. ಆದರೆ ಧಲಾಯಿಯ ಪೊಲೀಸ್ ವರಿಷ್ಠ ಮಿಹಿರ್ಲಾಲ್ ದಾಸ್ ಭಾರೀ ಪೊಲೀಸ್ ಪಡೆಯೊಂದಿಗೆ ಸ್ಥಳದಲ್ಲಿರುವುದರಿಂದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ದೇಬ್ ತಿಳಿಸಿದ್ದಾರೆ.







