ಏರ್ ಇಂಡಿಯಾಗೆ ಟ್ರಬಲ್: ಮೂವರು ಸಿಬ್ಬಂದಿ ವಜಾಗೊಳಿಸುವಂತೆ ಡಿಜಿಸಿಎಯಿಂದ ಆದೇಶ
ಪೈಲಟ್ ಹಾರಾಟ ಅವಧಿಯಯನ್ನು ಉಲ್ಲಂಘಿಸಿದ್ದಕ್ಕೂ ಶೋಕಾಸ್ ನೋಟಿಸ್

PC : PTI
ಹೊಸದಿಲ್ಲಿ: ವಿಮಾನ ಸಿಬ್ಬಂದಿಗಳ ಪರವಾನಗಿ, ವಿಶ್ರಾಂತಿ ಹಾಗೂ ಹಾಲಿ ಅಗತ್ಯಗಳನ್ನು ಪೂರೈಸುವಲ್ಲಿ ಲೋಪವೆಸಗಿದ ಆರೋಪದ ಮೇಲೆ, ವಿಮಾನ ಸಿಬ್ಬಂದಿಗಳ ಪಾಳಿ ಬದಲಾವಣೆಯ ಮೂವರು ಮೇಲ್ವಿಚಾರಕರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ ಆದೇಶಿಸಿದೆ.
ಅಲ್ಲದೆ, ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ನೀಡಲಾಗಿದ್ದ ವಿಮಾನ ಕರ್ತವ್ಯ ಅವಧಿ ಮಿತಿ ಅನುಮತಿಯನ್ನು ಮೀರಿ, ಮೇ 16 ಹಾಗೂ 17ರಂದು ಬೆಂಗಳೂರಿನಿಂದ ಲಂಡನ್ ಗೆ ಎರಡು ವಿಮಾನಗಳ ಹಾರಾಟ ನಡೆಸುವ ಮೂಲಕ, ಪೈಲಟ್ ಗಳು 10 ಗಂಟೆಗಿಂತಲೂ ಹೆಚ್ಚು ಅವಧಿ ಕಾಲ ಹಾರಾಟ ನಡೆಸುವಂತೆ ಮಾಡಲಾಗಿದೆ ಎಂದು ಆರೋಪಿಸಿ, ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಅನ್ನೂ ಜಾರಿಗೊಳಿಸಲಾಗಿದೆ.
“ವಿಮಾನ ಸಿಬ್ಬಂದಿಗಳ ಪರವಾನಗಿ, ವಿಶ್ರಾಂತಿ ಹಾಗೂ ಹಾಲಿ ಅಗತ್ಯಗಳ ಪೂರೈಕೆಯಲ್ಲಿ ಲೋಪಗಳಿದ್ದ ಹೊರತಾಗಿಯೂ, ಸಂಬಂಧಿತ ವಿಮಾನಗಳ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಿ, ವಿಮಾನಗಳ ಕಾರ್ಯಾಚರಣೆ ನಡೆಸುವ ಮೂಲಕ, ಪದೇ ಪದೇ ಹಾಗೂ ಗಂಭೀರ ಉಲ್ಲಂಘನೆಗಳನ್ನು ಎಸಗಿರುವುದು ಏರ್ ಇಂಡಿಯಾ ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಿರುವ ದಾಖಲೆಗಳಿಂದ ತಿಳಿದು ಬಂದಿದೆ” ಎಂದು ಈ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
“ಈ ಉಲ್ಲಂಘನೆಗಳನ್ನು ಸಿಬ್ಬಂದಿಗಳ ಪಾಳಿ ಬದಲಾವಣೆ ವಿಭಾಗವು ಪರಾಮರ್ಶೆಯ ವೇಳೆ ಪತ್ತೆ ಹಚ್ಚಲಾಗಿದೆ. ಸಿಬ್ಬಂದಿಗಳ ವೇಳಾಪಟ್ಟಿ, ಪಾಲನೆಯ ಮೇಲಿನ ನಿಗಾವಣೆ ಹಾಗೂ ಆಂತರಿಕ ಉತ್ತರದಾಯಿತ್ವದಲ್ಲಿ ವ್ಯವಸ್ಥಿತ ವೈಫಲ್ಯವಾಗಿರುವುದು ಸ್ವಯಂಪ್ರೇರಿತ ದಾಖಲೆ ಬಹಿರಂಗದ ವೇಳೆ ಬೆಳಕಿಗೆ ಬಂದಿದೆ” ಎಂದೂ ಈ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಕಾರ್ಯಾಚರಣಾ ಲೋಪಕ್ಕೆ ನೇರವಾಗಿ ಹೊಣೆಯಾಗಿರುವ ಪ್ರಮುಖ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳುವಲ್ಲಿನ ಗೈರು ನಿರ್ದಿಷ್ಟ ಸ್ವರೂಪದ ಕಳವಳಕಾರಿ ಸಂಗತಿಯಾಗಿದೆ” ಎಂದೂ ಈ ನೋಟಿಸ್ ನಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
“ಈ ಆರೋಪದಲ್ಲಿ ಗುರುತಿಸಲಾಗಿರುವ ಮೂವರು ಹಿರಿಯ ಅಧಿಕಾರಿಗಳು ಗಂಭೀರ ಹಾಗೂ ಪುನರಾವರ್ತಿತ ಲೋಪಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದ್ದರೂ, ಇದು ಕೇವಲ ಅನಧಿಕೃತ ಹಾಗೂ ಹೊಂದಾಣಿಕೆಯಿಲ್ಲದ ಸಿಬ್ಬಂದಿಗಳ ನಿಯೋಜನೆ, ಕಡ್ಡಾಯ ಪರವಾನಗಿ ಮತ್ತು ಹಾಲಿ ಅಗತ್ಯಗಳ ರೂಢಿಯ ಉಲ್ಲಂಘನೆ, ವೇಳಾಪಟ್ಟಿ ಶಿಷ್ಟಾಚಾರದಲ್ಲಿನ ವ್ಯವಸ್ಥಿತ ವೈಫಲ್ಯ ಹಾಗೂ ಉದಾಸೀನತೆಗೆ ಮಾತ್ರ ಸೀಮಿತವಾಗಿಲ್ಲ” ಎಂದೂ ಈ ನೋಟಿಸ್ ನಲ್ಲಿ ಹೇಳಲಾಗಿದೆ.







