ತಮಿಳುನಾಡು | ಹೆದ್ದಾರಿಯಲ್ಲಿ ಟ್ರಕ್ ಪಲ್ಟಿ: 80 ಎಲ್ಪಿಜಿ ಸಿಲಿಂಡರ್ ಗಳ ಸ್ಫೋಟ!

Photo: newindianexpress
ಅರಿಯಲೂರ್ (ತಮಿಳುನಾಡು): ನೂರಾರು ಎಲ್ಪಿಜಿ ಸಿಲಿಂಡರ್ ಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಒಂದು ಪಲ್ಟಿ ಹೊಡೆದ ಪರಿಣಾಮ, ಎಲ್ಪಿಜಿ ಸಿಲಿಂಡರ್ ಗಳು ಸ್ಫೋಟಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ಅಟ್ಟೂರು-ತಂಜಾವೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 136ರಲ್ಲಿ ನಡೆದಿದೆ.
ಸರಣಿ ಸ್ಫೋಟಗಳು ಸಂಭವಿಸಿ, ಬೆಂಕಿಯುಂಡೆಗಳು ಗಗನಕ್ಕೆ ಚಿಮ್ಮಿದ್ದರಿಂದ, ಸುತ್ತಮುತ್ತಲಿನ ಪ್ರದೇಶದ ಜನರು ಆಘಾತಕ್ಕೊಳಗಾಗಿದ್ದಾರೆ. ಈ ಘಟನೆ ಅರಿಯಲೂರ್ ಜಿಲ್ಲೆಯ ವಾರಣವಾಸಿ ಬಳಿ ನಡೆದಿದ್ದು, ಸುಮಾರು 80 ಸಿಲಿಂಡರ್ ಗಳು ಸ್ಫೋಟಗೊಂಡಿವೆ ಎಂದು ಹೇಳಲಾಗಿದೆ.
ಈ ಘಟನೆಯಲ್ಲಿ ತಿರುಚ್ಚಿ ಜಿಲ್ಲೆಯ ಇನಾಂ ಕುಲತ್ತೂರ್ ಗ್ರಾಮದ ನಿವಾಸಿಯಾದ ಟ್ರಕ್ ಚಾಲಕ ಪಿ.ಕನಗರಾಜ್(34)ರ ಮುಖ ಹಾಗೂ ತಲೆಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಅರಿಯಲೂರ್ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಟ್ರಕ್ ಚಾಲಕ ಕನಗರಾಜ್ ಇನಾಂ ಕಲತ್ತೂರ್ ನಲ್ಲಿನ ಬಾಟ್ಲಿಂಗ್ ಪ್ಲಾಂಟ್ ನಿಂದ ಅರಿಯಲೂರ್ ನಲ್ಲಿರುವ ಖಾಸಗಿ ವಿತರಣೆಗಾರರಿಗೆ ತಲಾ 14 ಕೆಜಿ ತೂಕದ 359 ಅನಿಲ ಸಿಲಿಂಡರ್ ಗಳು ಹಾಗೂ ತಲಾ 5 ಕೆಜಿ ತೂಕದ 14 ಸಿಲಿಂಡರ್ ಗಳನ್ನು ಸಾಗಣೆ ಮಾಡುತ್ತಿದ್ದರು. ಮಧ್ಯರಾತ್ರಿ ಕಲ್ಲಗಂ ಟೋಲ್ ಪ್ಲಾಝಾ ಬಳಿ ತನ್ನ ಟ್ರಕ್ ಅನ್ನು ನಿಲುಗಡೆ ಮಾಡಿದ್ದ ಕನಗರಾಜ್, ಮಂಗಳವಾರ ಮುಂಜಾನೆ ತಮ್ಮ ಪ್ರಯಾಣವನ್ನು ಮುಂದುವರಿಸಿದ್ದರು. ಬೆಳಗ್ಗೆ ಸುಮಾರು 6.45ರ ವೇಳೆಗೆ ಅವರು ಲಾರಿಯ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರಿಂದ, ರಸ್ತೆ ಬದಿಯ ಹಳ್ಳಕ್ಕೆ ಟ್ರಕ್ ನ ಚಕ್ರಗಳು ಜಾರಿದ್ದು, ಟ್ರಕ್ ಸಂಪೂರ್ಣವಾಗಿ ಕೆಳಕ್ಕೆ ಮಗುಚಿ ಬಿದ್ದಿದೆ ಎಂದು ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಕನಗರಾಜ್ ರ ನೆರವಿಗೆ ಸ್ಥಳೀಯರು ಧಾವಿಸಿದ್ದು, 108 ಆ್ಯಂಬುಲೆನ್ಸ್ ಸೇವೆಯ ಮೂಲಕ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನಾ ಸ್ಥಳದಿಂದ ಚಾಲಕ ಕನಗರಾಜ್ ರನ್ನು ಸ್ಥಳೀಯರು ಕರೆದೊಯ್ದ ಬಳಿಕವೂ, ಮಗುಚಿ ಬಿದ್ದಿದ್ದ ಟ್ರಕ್ ನಲ್ಲಿನ ಅನಿಲ ಸಿಲಿಂಡರ್ ಗಳು ಸುಮಾರು ಹತ್ತು ನಿಮಿಷಗಳ ಕಾಲ ಸ್ಫೋಟಿಸುತ್ತಲೇ ಇದ್ದವು ಎಂದು ವರದಿಯಾಗಿದೆ.
ಒಂದರ ನಂತರ ಒಂದರಂತೆ ಸುಮಾರು 80 ಅನಿಲ ಸಿಲಿಂಡರ್ ಗಳು ಸ್ಫೋಟಗೊಂಡಿದ್ದು, ಅದರಿಂದ ಹೊರಹೊಮ್ಮಿದ ಜ್ವಾಲೆಗಳು ಹಾಗೂ ಕಂಪನಗಳು ಘಟನಾ ಸ್ಥಳದಿಂದ ಸುಮಾರು ಎರಡು ಕಿಮೀ ದೂರದವರೆಗೂ ಕಂಡು ಬಂದವು ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ಇರುವ ಅಗ್ನಿಶಾಮಕ ತಂಡಗಳೊಂದಿಗೆ ಕೀಲಾಪುರ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಸತತ ಎರಡು ಗಂಟೆಗಳ ಕಾರ್ಯಾಚರಣೆಯ ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯ ಜ್ವಾಲೆಗಳನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಘಟನೆಯಲ್ಲಿ ಟ್ರಕ್ ಸಂಪೂರ್ಣವಾಗಿ ಹಾನಿಯಾಗಿದ್ದರೂ, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.







