ನನ್ನ ಮಾತುಗಳಿಗೆ ಬದ್ಧ: ರಾಜಕೀಯ ಶಾಸ್ತ್ರ ಉಪನ್ಯಾಸಕ ಅಚಿನ್ ವನೈಕ್
ಇಸ್ರೇಲ್- ಫೆಲೆಸ್ತೀನ್ ಸಂಘರ್ಷದ ಇತಿಹಾಸ ಕುರಿತ ಉಪನ್ಯಾಸ ವಿವಾದ

ಅಚಿನ್ ವನೈಕ್ | Photo: scroll.in
ಹೊಸದಿಲ್ಲಿ: ಇಸ್ರೇಲ್- ಫೆಲೆಸ್ತೀನ್ ಸಂಘರ್ಷದ ಇತಿಹಾಸ ಕುರಿತ ಉಪನ್ಯಾಸದ ವೇಳೆ ನಾನು ಆಡಿರುವ ಮಾತುಗಳಿಗೆ ಬದ್ಧನಾಗಿದ್ದೇನೆ ಎಂದು ಹರ್ಯಾಣದ ಒ.ಪಿ. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯದ ರಾಜಕೀಯ ಶಾಸ್ತ್ರ ಉಪನ್ಯಾಸಕ ಅಚಿನ್ ವನೈಕ್ ಹೇಳಿದ್ದಾರೆ.
ನೀವು ಆಡಿರುವ ಮಾತುಗಳಿಗೆ ವಿಷಾದ ವ್ಯಕ್ತಪಡಿಸಬೇಕೆಂದು ವಿಶ್ವವಿದ್ಯಾನಿಲಯವು ಅವರಿಗೆ ಸೂಚಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಖಾಸಗಿ ಲಿಬರಲ್ ಆರ್ಟ್ಸ್ ವಿಶ್ವವಿದ್ಯಾನಿಲಯದಲ್ಲಿ ನ. 1ರಂದು ನೀಡಿರುವ ಉಪನ್ಯಾಸದ ವೇಳೆ, ಝಿಯೋನಿಸಮ್ (ಇಸ್ರೇಲ್ ನ ರಾಷ್ಟ್ರೀಯ ಸಿದ್ಧಾಂತ) ಮತ್ತು ಹಿಂದುತ್ವ ರಾಷ್ಟ್ರೀಯತೆ ನಡುವೆ ಸಾಮ್ಯತೆ ಇದೆ ಎಂದು ಅಚಿನ್ ವನೈಕ್ ಹೇಳಿದ್ದರು. ಹಿಂಸಾಚಾರದ ಒಂದು ಕೃತ್ಯವನ್ನು ಭಯೋತ್ಪಾದನೆ ಎಂದು ಬಣ್ಣಿಸುವುದು ಮತ್ತು ಹಿಂಸಾಚಾರದ ಇತರ ಕೃತ್ಯಗಳನ್ನು ಭಯೋತ್ಪಾದನೆ ಎಂದು ಬಣ್ಣಿಸದಿರುವುದು ಯಾಕೆ ಎಂದು ಅವರು ಪ್ರಶ್ನಿಸಿದ್ದರು. ಅವರ ಭಾಷಣದ ವೀಡಿಯೊಗಳು ವೈರಲಾಗಿವೆ.
ಅದೇ ವೇಳೆ, ಝಿಯೋನಿಸಮ್ ಮತ್ತು ಹಿಂದುತ್ವ ಭಿನ್ನವಾಗಿವೆ ಎಂಬುದಾಗಿಯೂ ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ರಾಜಕೀಯ ಶಾಸ್ತ್ರ ಉಪನ್ಯಾಸಕ ಹೇಳಿದ್ದರು. ಝಿಯೋನಿಸಮ್ ‘‘ಮುಸ್ಲಿಮ್ ವಿರೋಧಿಯಲ್ಲ’’, ಆದರೆ ಹಿಂದುತ್ವ ‘‘ಮೂಲಭೂತವಾಗಿ ಮತ್ತು ಪ್ರಧಾನವಾಗಿ ಮುಸ್ಲಿಮ್ ವಿರೋಧಿ ಮತ್ತು ಇಸ್ಲಾಮಿಕ್ ವಿರೋಧಿ’’ಯಾಗಿದೆ ಎಂದು ಅವರು ಹೇಳಿದ್ದರು.
ತನ್ನ ಮಾತುಗಳನ್ನು ಸಂದರ್ಭಕ್ಕೆ ಹೊರತಾಗಿ ಉಲ್ಲೇಖಿಸಲಾಗಿದೆ ಎಂದು ‘ದ ಹಿಂದೂ’ ಜೊತೆಗೆ ಮಾತನಾಡಿದ ವನೈಕ್ ಹೇಳಿದ್ದಾರೆ. ‘‘ನಾನು ಭಯೋತ್ಪಾದನೆಯನ್ನು ಬೆಂಬಲಿಸುತ್ತೇನೆ ಎನ್ನುವ ಆರೋಪವು ಶುದ್ಧ ಮೂರ್ಖತನವಾಗಿದೆ’’ ಎಂದು ಅವರು ಹೇಳಿದರು. ‘‘ಹಮಾಸ್ ಕೃತ್ಯವನ್ನು ನಾನು ಭಯೋತ್ಪಾದಕ ಕೃತ್ಯ ಎಂಬುದಾಗಿ ಪರಿಗಣಿಸುತ್ತೇನೆ ಮತ್ತು ಅದನ್ನು ಖಂಡಿಸುತ್ತೇನೆ ಎನ್ನುವುದನ್ನು ನಾನಿಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ’’ ಎಂದರು.
ನಿಮ್ಮ ಉಪನ್ಯಾಸದ ವೇಳೆ ನೀವು ಆಡಿರುವ ಮಾತುಗಳು ಅನಗತ್ಯವಾಗಿದ್ದವು ಮತ್ತು ವಿಷಯಕ್ಕೆ ಸಂಬಂಧಿಸಿದ್ದಾಗಿರಲಿಲ್ಲ ಎಂಬುದಾಗಿ ಖಾಸಗಿ ಲಿಬರಲ್ ಆರ್ಟ್ಸ್ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ದಬಿರು ಶ್ರೀಧರ್ ಪಟ್ನಾಯಕ್, ವನೈಕೆ ಗೆ ನ. 13ರಂದು ಪತ್ರವೊಂದನ್ನು ಬರೆದ ಬಳಿಕ, ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಝಿಯೋನಿಸಮ್ ಬಗ್ಗೆ ನೀವು ನೀಡಿರುವ ವ್ಯಾಖ್ಯಾನವು ‘‘ಮಾಹಿತಿದಾಯಕ’’ವಾಗಿತ್ತು, ಆದರೆ ಹಿಂದುತ್ವ ಕುರಿತ ನಿಮ್ಮ ಹೇಳಿಕೆಗಳು ‘‘ಅನಗತ್ಯ ಮತ್ತು ಆಕ್ಷೇಪಾರ್ಹವಾಗಿದ್ದವು’’ ಎಂದು ಪತ್ರದಲ್ಲಿ ಹೇಳಲಾಗಿದೆ.
ಇಸ್ರೇಲ್ ನಿಂದಲೂ ಆಕ್ಷೇಪ!
ವನೈಕ್ರ ಉಪನ್ಯಾಸಕ್ಕೆ ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯೂ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ಇಸ್ರೇಲ್ ರಾಯಭಾರಿ ನಾವೊರ್ ಗಿಲೋನ್ ವಿಶ್ವವಿದ್ಯಾನಿಲಯದ ಉಪಕುಲಪತಿ ಸಿ. ರಾಜ್ ಕುಮಾರ್ ಗೆ ಪತ್ರವೊಂದನ್ನು ಬರೆದಿದ್ದಾರೆ







