ನಾಳೆ(ಆ.27)ಯಿಂದ ಟ್ರಂಪ್ ಸುಂಕ ಜಾರಿ | ಭಾರತದ ಸರಕುಗಳಿಗೆ ಶೇ.50ರಷ್ಟು ಆಮದು ಸುಂಕ ವಿಧಿಸುವ ನೋಟಿಸ್ ಪ್ರಕಟಿಸಿದ ಅಮೆರಿಕ

ಡೊನಾಲ್ಡ್ ಟ್ರಂಪ್ | PC: X
ಹೊಸದಿಲ್ಲಿ,ಆ.26: ಅಮೆರಿಕವನ್ನು ಪ್ರವೇಶಿಸುವ ಭಾರತದ ಸರಕುಗಳಿಗೆ ಶೇ.50ರಷ್ಟು ಆಮದು ಸುಂಕ ಹೇರಿಕೆಯು ಬುಧವಾರದಿಂದ ಜಾರಿಗೆ ಬರಲಿದೆ. ಈ ಬಗ್ಗೆ ಅಮೆರಿಕದ ಕಸ್ಟಮ್ಸ್ ಹಾಗೂ ಗಡಿ ರಕ್ಷಣಾ (ಸಿಬಿಪಿ) ಇಲಾಖೆಯು ಅಧಿಕೃತವಾಗಿ ಸಾರ್ವಜನಿಕ ನೋಟಿಸ್ ಒಂದನ್ನು ಮಂಗಳವಾರ ಪ್ರಕಟಿಸಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗಸ್ಟ್ 6ರಂದು ಸಹಿಹಾಕಿದ ಕಾರ್ಯಾದೇಶದ ಅನುಸಾರವಾಗಿ ನೂತನ ಸುಂಕಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ನೂತನ ಸುಂಕಗಳು ಅನ್ವಯವಾಗುವ ವಿವಿಧ ಸಾಮಾಗ್ರಿಗಳ ಪಟ್ಟಿಯನ್ನು ನೋಟಿಸ್ನೊಂದಿಗೆ ಪ್ರಕಟಿಸಲಾಗಿದೆ.
ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 7ರಂದು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ.50ಕ್ಕೆ ದ್ವಿಗುಣಗೊಳಿಸುವುದಾಗಿ ಘೋಷಿಸಿದ್ದರು. ಈಗಾಗಲೇ ಜುಲೈ ಕೊನೆಯಲ್ಲಿ ಘೋಷಿಸಿದ್ದ ಶೇ.25 ಸುಂಕ ಆಗಸ್ಟ್ 7ರಿಂದಲೇ ಜಾರಿಯಾಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಿಲ್ಲಿಸುವ ತಂತ್ರದ ಭಾಗವಾಗಿ ಟ್ರಂಪ್ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಈ ಮೊದಲು ಹೇಳಿದ್ದರು.
ಈ ವರ್ಷದ ಆಗಸ್ಟ್ ನಲ್ಲಿ ಟ್ರಂಪ್ ಅವರು ಭಾರತದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕವನ್ನು ವಿಧಿಸುವುದಾಗಿ ಘೋಷಿಸಿದ್ದರು. ಇದರೊಂದಿಗೆ ಭಾರತದಿಂದ ಆಗಮಿಸುವ ಸರಕುಗಳ ಒಟ್ಟು ಸುಂಕದ ಪ್ರಮಾಣವು ಶೇ.50 ರಷ್ಟಾಗುತ್ತದೆ.
ಉಕ್ರೇನ್ ವಿರುದ್ಧ ಯುದ್ಧ ನಿರತವಾಗಿರುವ ರಶ್ಯದಿಂದ ಭಾರತವು ತೈಲ ಖರೀದಿಯನ್ನು ಮುಂದುವರಿಸಿರುವುದಕ್ಕೆ ದಂಡವಾಗಿ ಹೆಚ್ಚುವರಿ ಸುಂಕವನ್ನು ವಿಧಿಸಲಾಗಿದೆ ಎಂದು ಟ್ರಂಪ್ ಆಡಳಿತ ಹೇಳಿಕೊಂಡಿದೆ. ಅಮೆರಿಕದ ಈ ನಡೆಯು ನ್ಯಾಯಯುತವಲ್ಲ, ಅಸಮರ್ಥನೀಯ ಹಾಗೂ ಅತಾರ್ಕಿಕ ಎಂದು ಭಾರತವು ಖಂಡಿಸಿದೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಿರುವುದೆಲ್ಲವನ್ನೂ ಮಾಡುವುದಾಗಿ ಘೋಷಿಸಿದೆ.
ನೂತನ ಅಧಿಸೂಚನೆಯನ್ನು ಭಾರತವನ್ನೇ ಉದ್ದೇಶಿಸಿ ಪ್ರಕಟಿಸಲಾಗಿದ್ದು, ಅದರಲ್ಲಿ ಭಾರತಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ರಶ್ಯದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಚೀನಾದ ಬಗ್ಗೆ ಪ್ರಸ್ತಾವವನ್ನು ಮಾಡಿಲ್ಲ.
ಭಾರತವು ಅಮೆರಿಕಕ್ಕೆ ರಫ್ತು ಮಾಡುತ್ತಿರುವ ಒಟ್ಟು 87.3 ಶತಕೋಟಿ ಡಾಲರ್ ಮೊತ್ತದ ಸರಕುಗಳ ಪೈಕಿ ಅರ್ಧಾಂಶದಷ್ಟು, ಶೇ.50 ಸುಂಕಕ್ಕೆ ಒಳಪಡಲಿದೆ. ಪ್ರಮುಖವಾಗಿ ಜವಳಿ, ಉಡುಪುಗಳು, ರತ್ನಗಳು, ಆಭರಣ, ಸಮುದ್ರ ಆಹಾರ (ಮುಖ್ಯವಾಗಿ ಸಿಗಡಿ) ಹಾಗೂ ಚರ್ಮ ಸೇರಿದಂತೆ ಹಲವಾರು ಸರಕುಗಳ ಮೇಲೆ ಶೇ.50ರಷ್ಟು ಸುಂಕ ಹೇರಿಕೆ ಆಗಲಿದೆ.ಆದರೆ ಫಾರ್ಮಾಸ್ಯೂಟಿಕಲ್ಸ್, ಇಲೆಕ್ಟ್ರಾನಿಕ್ಸ್ ಸೇರಿದಂತೆ ಕೆಲವು ಸಾಮಾಗ್ರಿಗಳು ಈ ಸುಂಕದಿಂದ ವಿನಾಯಿತಿ ಪಡೆಯಲಿವೆ.
ರತ್ನ ಹಾಗೂ ಆಭರಣಗಳು:
ಅಮೆರಿಕಕ್ಕೆ ರಫ್ತಾಗುವ ಭಾರತದ ಒಟ್ಟು ರತ್ನಗಳು ಹಾಗೂ ಆಭರಣ ರಫ್ತುಗಳ ಪೈಕಿ ಶೇ.33ರಷ್ಟು ಉತ್ಪನ್ನಗಳು ಇದರಿಂದ ಬಾಧಿತವಾಗಲಿವೆ. ಇದಕ್ಕಿಂತಲೂ ಮಿಗಿಲಾಗಿ ಈಗಾಗಲೇ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ವಜ್ರಗಳ ಉದ್ಯಮದಿಂದ ಒತ್ತಡವನ್ನು ಎದುರಿಸುತ್ತಿರುವ ಪಾಲಿಶ್ ಮಾಡಲಾದ ವಜ್ರದ ಉದ್ಯಮ ವಲಯವು ನೂತನ ಸುಂಕ ಹೇರಿಕೆಯಿಂದಾಗಿ ಇನ್ನೂ ತೀವ್ರವಾಗಿ ತೊಂದರೆಗೀಡಾಗಲಿದೆ.
ಭಾರತದಲ್ಲಿ ಉತ್ಪಾದನೆಯಾಗುವ ಶೇ.26ರಷ್ಟು ಜವಳಿಗಳು ಅಮೆರಿಕಕ್ಕೆ ರಫ್ತಾಗುತ್ತಿದೆ. ಅಮೆರಿಕಕ್ಕೆ 10.3 ಶತಕೋಟಿ ಡಾಲರ್ ಮೊತ್ತದ ರಫ್ತು ಮಾಡುವ ಜವಳಿ ಉದ್ಯಮದ ಮೇಲೆ ಅಮೆರಿಕದ ಶೇ.50ರಷ್ಟು ಸುಂಕ ಹೇರಿಕೆಯು ತೀವ್ರ ಪರಿಣಾಮ ಬೀರಲಿದೆಯೆಂದು ಜವಳಿ, ಉಡುಪು ಉತ್ತೇಜನ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಿಥಿಲೇಶ್ವರ ಠಾಕೂರ್ ಹೇಳಿದ್ದಾರೆ.
ಶೇ.50ರಷ್ಟು ಸುಂಕವಿಧಿಸುವ ಟ್ರಂಪ್ ಆಡಳಿತದ ಕ್ರಮದಿಂದಾಗಿ ಅಮೆರಿಕಕ್ಕೆ ರಫ್ತಾಗುವ ಭಾರತದ ಶೇ.55ರಷ್ಟು ಸರಕುಗಳ ಮೇಲೆ ಪರಿಣಾಮ ಬೀರಲಿದೆ ಹಾಗೂ ವಿಯೆಟ್ನಾಂ, ಬಾಂಗ್ಲಾದೇಶ ಮತ್ತು ಚೀನಾದಂತಹ ಪ್ರತಿಸ್ಪರ್ಧಿ ರಾಷ್ಟ್ರಗಳಿಗೆ ಲಾಭವಾಗಲಿದೆ ಎಂದು ರಫ್ತುದಾರ ಸಂಘಟನೆಗಳು ತಿಳಿಸಿವೆ.
‘‘ಅಮೆರಿಕದ ಗ್ರಾಹಕರು ಈಗಾಗಲೇ ಸರಕುಗಳ ಆಮದಿಗೆ ಹೊಸ ಆರ್ಡರ್ ಸಲ್ಲಿಸುವುದನ್ನು ಈಗಾಗಲೇ ನಿಲ್ಲಿಸಿಬಿಟ್ಟಿದ್ದಾರೆ. ಅಮೆರಿಕದಿಂದ ಹೆಚ್ಚುವರಿ ಸುಂಕ ಹೇರಿಕೆಯಿಂದಾಗಿ, ಸೆಪ್ಟೆಂಬರ್ ನಿಂದ ಶೇ.20-30ಷ್ಟು ರಫ್ತು ಪ್ರಮಾಣ ಕಡಿಮೆಯಾಗಲಿದೆ’’ ಎಂದು ಎಂಜಿನಿಯರಿಂಗ್ ರಫ್ತುಗಳ ಉತ್ತೇಜನ ಮಂಡಳಿಯ ಅಧ್ಯಕ್ಷ ಪಂಕಜ್ ಚಡ್ಡಾ ಹೇಳಿದ್ದಾರೆ.







