SA G20ಗೆ ಟ್ರಂಪ್ ಗೈರು | ಸ್ವಘೋಷಿತ ವಿಶ್ವಗುರು ಮೋದಿ ಹಾಜರಿ ಖಚಿತ: ಕಾಂಗ್ರೆಸ್ ವ್ಯಂಗ್ಯ

ಡೊನಾಲ್ಡ್ ಟ್ರಂಪ್ , ಜೈರಾಮ್ ರಮೇಶ್ | Photo Credit : PTI
ಹೊಸದಿಲ್ಲಿ: ಇದೇ ತಿಂಗಳು 22-23ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಹಾಜರಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಬೆನ್ನಿಗೇ, “ಪ್ರಧಾನಿ ನರೇಂದ್ರ ಮೋದಿ ಸ್ವಯಂಘೋಷಿತ ವಿಶ್ವಗುರು” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಛೇಡಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, “ಇದೇ ತಿಂಗಳು 22-23ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಹೀಗಾಗಿ, ಸ್ವಯಂಘೋಷಿತ ವಿಶ್ವಗುರು ಶೃಂಗಸಭೆಗೆ ಖುದ್ದಾಗಿ ಹಾಜರಾಗಲಿದ್ದಾರೆ ಎಂದು ನಾವು ಖಚಿತವಾಗಿ ಹೇಳಬಹುದು” ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ನರೇಂದ್ರ ಮೋದಿಯವರಿಗೆ ಡೊನಾಲ್ಡ್ ಟ್ರಂಪ್ ಅವರನ್ನು ಕಂಡರೆ ಭಯ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಇದೇ ವರ್ಷ ಮೇ ತಿಂಗಳಲ್ಲಿ ಉಲ್ಬಣಿಸಿದ್ದ ಸಂಘರ್ಷದ ಮಧ್ಯಸ್ಥಿಕೆಯನ್ನು ತಾನು ವಹಿಸಿದ್ದುದಾಗಿ ಹಾಗೂ ವ್ಯಾಪಾರ ಬೆದರಿಕೆಯೊಡ್ಡಿ ಉಭಯ ದೇಶಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಡುವಂತೆ ಮಾಡಿದ್ದಾಗಿ ಡೊನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿಕೆ ನೀಡಿದ್ದರು. ಅಲ್ಲದೆ, ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಶ್ಯದಿಂದ ತೈಲ ಖರೀದಿಯನ್ನು ಸ್ಥಗಿತಗೊಳಿಸದಿದ್ದರೆ, ಭಾರತದ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಮತ್ತಷ್ಟು ಏರಿಕೆ ಮಾಡುವ ಎಚ್ಚರಿಕೆಯನ್ನೂ ಅವರು ನೀಡಿದ್ದರು. ಬಳಿ, ರಶ್ಯದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಮೋದಿ ಹೇಳಿದ್ದಾರೆ ಎಂದೂ ಅವರು ಘೋಷಿಸಿದ್ದರು.
ಈ ಹೇಳಿಕೆಗಳಿಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು, ಪ್ರಧಾನಿ ನರೇಂದ್ರ ಮೋದಿಗೆ ಡೊನಾಲ್ಡ್ ಟ್ರಂಪ್ ರನ್ನು ಕಂಡರೆ ಭಯ ಎಂದು ಟೀಕಿಸಿದ್ದರು. ಇದೀಗ ಅದೇ ಧಾಟಿಯಲ್ಲಿ ಜೈರಾಮ್ ರಮೇಶ್ ಕೂಡಾ ಪ್ರಧಾನಿ ನರೇಂದ್ರ ಮೋದಿಯನ್ನು ಗೇಲಿ ಮಾಡಿದ್ದಾರೆ.
ಕಳೆದ ತಿಂಗಳು ಮಲೇಶಿಯಾದಲ್ಲಿ ಆಯೋಜನೆಗೊಂಡಿದ್ದ ದಕ್ಷಿಣ ಏಶ್ಯ ರಾಷ್ಟ್ರಗಳ ಒಕ್ಕೂಟ(ASEAN)ದ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗಿದ್ದರು. ಈ ನಡೆಯನ್ನೂ ಕುಹಕವಾಡಿದ್ದ ಜೈರಾಮ್ ರಮೇಶ್, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಂದ ಮೂಲೆಗುಂಪಾಗುವುದನ್ನು ತಪ್ಪಿಸಿಕೊಳ್ಳಲು ಪ್ರಧಾನಿ ಮೋದಿ ಕಾರಣ ಕಂಡುಕೊಂಡಿದ್ದಾರೆ. ಟ್ರಂಪ್ ಅವರನ್ನು ನೇರವಾಗಿ ಭೇಟಿಯಾಗುವುದು ತೀರಾ ಅಪಾಯಕಾರಿಯಾದ್ದರಿಂದ, ಸಭೆಗೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ಇದರಿಂದ ವಿಶ್ವದ ವಿವಿಧ ದೇಶಗಳ ನಾಯಕರನ್ನು ಆಲಂಗಿಸಿಕೊಂಡು, ಅವರೊಂದಿಗೆ ಫೋಟೊ ತೆಗೆಸಿಕೊಳ್ಳುವ ಹಾಗೂ ಜಾಗತಿಕ ವೇದಿಕೆಯಲ್ಲಿ ತಾನೊಬ್ಬ ವಿಶ್ವಗುರು ಎಂದು ಬಿಂಬಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲಿದ್ದಾರೆ” ಎಂದು ವ್ಯಂಗ್ಯವಾಡಿದ್ದರು.







