ಟ್ರಂಪ್ ‘ಅಮೆರಿಕನ್ ರಾಷ್ಟ್ರವಾದಿ’: ಜೈಶಂಕರ್ ಬಣ್ಣನೆ

ಜೈಶಂಕರ್ , ಟ್ರಂಪ್ | PTI
ಹೊಸದಿಲ್ಲಿ : ಭಾರತ-ಅಮೆರಿಕ ನಡುವಿನ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಒತ್ತಿ ಹೇಳಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು,ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ‘ಅಮೆರಿಕನ್ ರಾಷ್ಟ್ರವಾದಿ ’ಎಂದು ಬಣ್ಣಿಸಿದ್ದಾರೆ.
ಗುರುವಾರ ದಿಲ್ಲಿ ವಿವಿಯ ಹಂಸರಾಜ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್,ಜಾಗತಿಕ ರಾಜತಾಂತ್ರಿಕತೆಯ ವಿಕಸನ ಸ್ವರೂಪ ಮತ್ತು ಅದಕ್ಕೆ ಭಾರತದ ಸ್ಪಂದನವನ್ನು ಎತ್ತಿ ತೋರಿಸಿದರು.
ಟ್ರಂಪ್ ಭಾರತದ ಸ್ನೇಹಿತರೇ ಅಥವಾ ಶತ್ರುವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,‘ನಾನು ಇತ್ತೀಚಿಗೆ ಟ್ರಂಪ್ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಮತ್ತು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಾಗಿತ್ತು. ಟ್ರಂಪ್ ಅಮೆರಿಕನ್ ರಾಷ್ಟ್ರವಾದಿಯಾಗಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ’ ಎಂದು ಹೇಳಿದರು.
ಟ್ರಂಪ್ ಅವರ ನೀತಿಗಳು ಜಾಗತಿಕ ವ್ಯವಹಾರಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಬಹುದು ಎಂದು ಜೈಶಂಕರ್ ಒಪ್ಪಿಕೊಂಡರಾದರೂ,ಭಾರತದ ವಿದೇಶಾಂಗ ನೀತಿಯು ರಾಷ್ಟೀಯ ಹಿತಾಸಕ್ತಿಯ ಮಾರ್ಗದರ್ಶನದೊಂದಿಗೆ ಮುಂದುವರಿಯುತ್ತದೆ ಎಂದು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವಿನ ಬಲವಾದ ಸ್ನೇಹದ ಬಗ್ಗೆ ಒತ್ತಿ ಹೇಳಿದ ಅವರು,‘ಅಮೆರಿಕದೊಂದಿಗೆ ನಮ್ಮ ಸಂಬಂಧವು ಬಲವಾಗಿದೆ ಮತ್ತು ಮೋದಿಯವರು ಟ್ರಂಪ್ ಜೊತೆ ಉತ್ತಮ ವೈಯಕ್ತಿಕ ಸಂಬಂಧವನ್ನು ಹೊಂದಿದ್ದಾರೆ ’ಎಂದರು.
ಭಾರತದ ಹೆಚ್ಚುತ್ತಿರುವ ಜಾಗತಿಕ ಪ್ರಭಾವ ಮತ್ತು ದೇಶದ ಕುರಿತು ಬದಲಾಗುತ್ತಿರುವ ದೃಷ್ಟಿಕೋನಗಳ ಬಗ್ಗೆ ಮಾತನಾಡಿದ ಜೈಶಂಕರ್,ಭಾರತೀಯರಲ್ಲದವರೂ ಈಗ ತಾವು ಭಾರತೀಯರು ಎಂದು ಹೇಳಿಕೊಳ್ಳುತ್ತಿದ್ದಾರೆ,ಇದರಿಂದ ತಮಗೆ ವಿಮಾನದಲ್ಲಿ ಎಲ್ಲಾದರೂ ಸೀಟ್ ಸಿಗುತ್ತದೆ ಎಂದು ಅವರು ಭಾವಿಸಿದ್ದಾರೆ ಎಂದು ಹೇಳಿದರು.
ತನ್ನ ವೃತ್ತಿಜೀವನದ ಬಗ್ಗೆಯೂ ಮಾತನಾಡಿದ ಅವರು,ಶೈಕ್ಷಣಿಕ ಮತ್ತು ರಾಜತಾಂತ್ರಿಕ ಕ್ಷೇತ್ರದಿಂದ ರಾಜಕೀಯಕ್ಕೆ ತನ್ನ ಪರಿವರ್ತನೆಯ ಒಳನೋಟಗಳನ್ನು ಹಂಚಿಕೊಂಡರು.
‘ನಾನು ರಾಜಕಾರಣಿ ಆಗುತ್ತೇನೆಂದು ಎಂದೂ ಯೋಚಿಸಿರಲಿಲ್ಲ. ರಾಜಕೀಯಕ್ಕೆ ನನ್ನ ಪ್ರವೇಶ ಆಕಸ್ಮಿಕವಾಗಿತ್ತು. ಅದನ್ನು ಅದೃಷ್ಟ ಎನ್ನಿ ಅಥವಾ ಮೋದಿ ಪ್ರಭಾವ ಎನ್ನಿ. ಯಾರೂ ಇಲ್ಲ ಎಂದು ಹೇಳಲು ಸಾಧ್ಯವಾಗದ ರೀತಿಯಲ್ಲಿ ಅವರು ನನ್ನ ಮನವೊಲಿಸಿದ್ದರು’ ಎಂದರು.
ವಿದೇಶದಲ್ಲಿ ನೆಲೆಸಿರುವ ಭಾರತೀಯರು ಈಗಲೂ ತಮ್ಮ ಬೆಂಬಲಕ್ಕಾಗಿ ತಾಯ್ನಾಡನ್ನೇ ಅವಲಂಬಿಸಿದ್ದಾರೆ ಎಂದ ಜೈಶಂಕರ್,‘ಜೋ ಭಿ ದೇಶ್ಕೆ ಬಾಹರ್ ಜಾತೇ ಹೈಂ,ವೋ ಹಮಾರೆ ಪಾಸ್ ಹೀ ಆತೆ ಹೈಂ. ಬಾಹರ್ ಹಮ್ ಹೀ ರಖವಾಲೆ ಹೈಂ’ ಎಂದು ಹೇಳಿದರು.







