ಬಿಹಾರದಲ್ಲಿ ಟ್ರಂಪ್ ಹೆಸರಿನಲ್ಲಿ ನಕಲಿ ವಾಸ್ತವ್ಯ ಪ್ರಮಾಣಪತ್ರಕ್ಕೆ ಅರ್ಜಿ!

Photo:X/@Theunk13
ಪಾಟ್ನಾ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತಾದ ತೀವ್ರ ಗದ್ದಲದ ಮಧ್ಯೆ ಸಮಸ್ತಿಪುರ ಜಿಲ್ಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿನಲ್ಲಿ ವಾಸ್ತವ್ಯ ಪ್ರಮಾಣಪತ್ರ ಕೋರಿ ಅರ್ಜಿಯೊಂದು ಸಲ್ಲಿಕೆಯಾಗಿದೆ ಎಂದು ಹೇಳುವ ಅರ್ಜಿ ನಮೂನೆ ವೈರಲ್ ಆಗಿದೆ. ಬಿಹಾರದಲ್ಲಿ ಹೆಚ್ಚುತ್ತಿರುವ ನಕಲಿ ವಾಸ್ತವ್ಯ ಪ್ರಮಾಣಪತ್ರ ಕುರಿತ ಚರ್ಚೆ ವಿಭಿನ್ನ ತಿರುವು ಪಡೆದುಕೊಂಡಿದೆ.
ಸಮಸ್ತಿಪುರ ಜಿಲ್ಲೆಯ ಮೊಹಿಯುದ್ದೀನ್ ನಗರದಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬರು 2025ರ ಜುಲೈ 29ರಂದು ಟ್ರಂಪ್ ಅವರ ಫೋಟೋ ಮತ್ತು ಹೆಸರನ್ನು ಬಳಸಿಕೊಂಡು ವಾಸ್ತವ್ಯ ಪ್ರಮಾಣಪತ್ರಕ್ಕೆ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಅರ್ಜಿಯಲ್ಲಿ ವಿಳಾಸವನ್ನು ಹಸನ್ಪುರ ಗ್ರಾಮ, ವಾರ್ಡ್ ಸಂಖ್ಯೆ 13, ಬಕರ್ಪುರ ಪೋಸ್ಟ್, ಮೊಹಿಯುದ್ದೀನ್ ನಗರ ಪೊಲೀಸ್ ಠಾಣೆ, ಸಮಸ್ತಿಪುರ ಜಿಲ್ಲೆ ಎಂದು ತಪ್ಪಾಗಿ ನಮೂದಿಸಲಾಗಿದೆ.
The application for a residential certificate for Donald Trump in Bihar!
— THE UNKNOWN MAN (@Theunk13) August 6, 2025
Police have registered a case..😅😆😂 pic.twitter.com/pTZ0ra57Gh
ಆಡಳಿತ ವ್ಯವಸ್ಥೆಯನ್ನು ಅಪಹಾಸ್ಯ ಮತ್ತು ಮಾನಹಾನಿ ಮಾಡುವ ದೃಷ್ಟಿಯಿಂದ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ. ಇದು ಐಟಿ ಕಾಯ್ದೆಯ ಗಂಭೀರ ಉಲ್ಲಂಘನೆಯಾಗಿದೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.







