ಔಷಧಿ ಕಂಪನಿಗಳಿಗೆ ಟ್ರಂಪ್ ನೂತನ ಆದೇಶ; ಭಾರತದಲ್ಲಿ ಔಷಧಿಗಳ ಬೆಲೆ ಹೆಚ್ಚಳ ಸಾಧ್ಯತೆ

ಡೊನಾಲ್ಡ್ ಟ್ರಂಪ್ | PC : NDTV
ಹೊಸದಿಲ್ಲಿ: ಅಮೆರಿಕದಲ್ಲಿ ಮಾರಾಟವಾಗುವ ಔಷಧಿಗಳ ಬೆಲೆಗಳನ್ನು ಅದೇ ಔಷಧಿಗೆ ಇತರ ದೇಶಗಳು ಪಾವತಿಸುತ್ತಿರುವ ಕನಿಷ್ಠ ದರಗಳನ್ನು ನಿಗದಿಗೊಳಿಸುವಂತೆ ಔಷಧಿ ತಯಾರಿಕೆ ಕಂಪನಿಗಳಿಗೆ ನಿರ್ದೇಶಿಸಿ ಹೊಸ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಸಹಿ ಹಾಕಿದ್ದಾರೆ. ಟ್ರಂಪ್ ಕ್ರಮ ಭಾರತದಲ್ಲಿ ಔಷಧಿಗಳ ಬೆಲೆಗಳಲ್ಲಿ ಗಣನೀಯ ಏರಿಕೆಗೆ ಕಾರಣವಾಗಬಹುದು ಎಂದು deccanherald.com ವರದಿ ಮಾಡಿದೆ.
ಟ್ರಂಪ್ ‘ಪರಮಾಪ್ತ ದೇಶ’ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ. ಇದು ಜಗತ್ತಿನಲ್ಲಿ ಎಲ್ಲಿಯೇ ಆದರೂ ಅತ್ಯಂತ ಕಡಿಮೆ ಬೆಲೆಯನ್ನು ಪಾವತಿಸುವ ದೇಶದ ದರವನ್ನೇ ಅಮೆರಿಕವು ಪಾವತಿಸುತ್ತದೆ ಎನ್ನುವುದನ್ನು ನಿರ್ದಿಷ್ಟಪಡಿಸುತ್ತದೆ.
ಇದರರ್ಥ ನಿರ್ದಿಷ್ಟ ಔಷಧಿಯೊಂದು ಭಾರತೀಯ ಮಾರುಕಟ್ಟೆಯಲ್ಲಿ 500 ರೂ.ಗೆ ಮಾರಾಟವಾಗುತ್ತಿದ್ದರೆ ಔಷಧಿ ತಯಾರಕರು ಅದೇ ಉತ್ಪನ್ನವನ್ನು ಅಮೆರಿಕದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ.
‘ಔಷಧಿಗಳ ಬೆಲೆಗಳನ್ನು ತಕ್ಷಣವೇ ಶೇ.30ರಿಂದ ಶೇ.80ರಷ್ಟು ಕಡಿಮೆ ಮಾಡಲಾಗುವುದು. ಸಮಾನತೆಯನ್ನು ತರುವ ಸಲುವಾಗಿ ವಿಶ್ವಾದ್ಯಂತ ಔಷಧಿ ಬೆಲೆಗಳು ಏರಿಕೆಯಾಗಲಿವೆ ಮತ್ತು ಹಲವಾರು ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕಕ್ಕೆ ನ್ಯಾಯ ಸಿಗಲಿದೆ’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಟ್ರಂಪ್ ಕ್ರಮವು ಔಷಧಿ ತಯಾರಕರು ಸಮಾನತೆಯನ್ನು ತರಲು ಭಾರತ ಮತ್ತು ಇತರ ದೇಶಗಳಲ್ಲಿ ಬೆಲೆಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಈ ಕ್ರಮವು ಅಮೆರಿಕದ ರೋಗಿಗಳಿಗೆ ತಕ್ಷಣದ ಪರಿಹಾರವನ್ನು ಒದಗಿಸಬಹುದಾದರೂ ಪ್ರಮುಖ ಔಷಧಿ ತಯಾರಿಕೆ ಕಂಪನಿಗಳು ವ್ಯಾಪಾರ ಮಾತುಕತೆಗಳ ಮೂಲಕ ತಮ್ಮ ಬೆಲೆಗಳನ್ನು ಹೆಚ್ಚಿಸುವಂತೆ ಭಾರತದಂತಹ ಕಡಿಮೆ ವೆಚ್ಚದ ಮಾರುಕಟ್ಟೆಗಳ ಮೇಲೆ ತೀವ್ರ ಒತ್ತಡ ಹೇರಬಹುದು. ಇದು ಜಾಗತಿಕ ಬೆಲೆ ಮರುನಿಗದಿಗೆ ಕಾರಣವಾಗಬಹುದು ಎಂದು ಗ್ಲೋಬಲ್ ಟ್ರೇಡ್ ರೀಸರ್ಚ್ ಇನಿಷಿಯೇಟಿವ್ನ ಸ್ಥಾಪಕ ಅಜಯ ಶ್ರೀವಾಸ್ತವ ಹೇಳಿದರು.
ಅಮೆರಿಕದ ಮಾರುಕಟ್ಟೆಯಲ್ಲಿ ಲಾಭಾಂಶ ಕಡಿತದಿಂದಾಗುವ ನಷ್ಟವನ್ನು ತುಂಬಿಕೊಳ್ಳಲು ಭಾರತೀಯ ಮತ್ತು ಇತರ ಮಾರುಕಟ್ಟೆಗಳಲ್ಲಿ ಬೆಲೆಗಳನ್ನು ಹೆಚ್ಚಿಸುವುದು ಔಷಧಿ ಕಂಪನಿಗಳಿಗೆ ಅನಿವಾರ್ಯವಾಗಲಿದೆ.
ಈ ಕ್ರಮವು ಅಮೆರಿಕನ್ನರಿಗೆ ಹೆಚ್ಚಿನ ಉಳಿತಾಯದ ಭರವಸೆಯನ್ನು ನೀಡುತ್ತದೆಯಾದರೂ ಅದು ಉದ್ಯಮ ಹಿನ್ನಡೆಯನ್ನು ಅನುಭವಿಸಬಹುದು. ತಯಾರಕರು ತಮ್ಮ ನಷ್ಟ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವನ್ನು ತುಂಬಿಕೊಳ್ಳಲು ಪ್ರಯತ್ನಿಸುವುದು ಕಡಿಮೆ ವೆಚ್ಚದ ದೇಶಗಳಲ್ಲಿ ಔಷಧಿಗಳ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ಇವೈ ಇಂಡಿಯಾದ ಸೌರಭ ಅಗರ್ವಾಲ್ ಹೇಳಿದರು.
ಈಗ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳಲ್ಲಿ ಔಷಧಿ ಬೆಲೆಗಳು ಪ್ರಮುಖವಾಗಲಿವೆ. ಭಾರತ ಮತ್ತು ಅಮೆರಿಕ ಈ ವರ್ಷದ ಸೆಪ್ಟಂಬರ್-ಅಕ್ಟೋಬರ್ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿವೆ. ವಿಶ್ವವು ಭಾರತದ ಜೆನೆರಿಕ್ ಔಷಧಿಗಳನ್ನು ಅವಲಂಬಿಸಿದೆ. ಈ ಮಾದರಿಯನ್ನು ಸಂರಕ್ಷಿಸುವುದು ಭಾರತದ ಹಿತಾಸಕ್ತಿಯಲ್ಲಿ ಮಾತ್ರವಲ್ಲ,ನೈತಿಕ ಮತ್ತು ಜಾಗತಿಕ ಅಗತ್ಯವೂ ಆಗಿದೆ ಎಂದು ಶ್ರೀವಾಸ್ತವ ಹೇಳಿದರು.







