"ಹೇಗೆ ಜೀವಂತವಾಗಿ ಮನೆಗೆ ಹೋಗುವೆ....": ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ ನ್ಯಾಯಾಧೀಶೆಗೆ ಕೋರ್ಟ್ನಲ್ಲೇ ಬೆದರಿಕೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ ಮಹಿಳಾ ನ್ಯಾಯಾಧೀಶರಿಗೆ ಅಪರಾಧಿ ಮತ್ತು ಆತನ ಪರ ವಕೀಲ ನ್ಯಾಯಾಲಯದಲ್ಲೇ ಬೆದರಿಕೆ ಹಾಕಿದ್ದಾರೆ.
ಆರೋಪಿಗಳ ಪರ ಆದೇಶ ನೀಡದ ಕಾರಣ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದಲ್ಲದೆ ಅವರ ಮೇಲೆ ವಸ್ತುವೊಂದನ್ನು ಎಸೆಯಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ. ʼನಿನ್ನ ಯೋಗ್ಯತೆಯೇನು? ನೀನು ಹೊರಗೆ ಸಿಗಬೇಕು, ಜೀವಂತವಾಗಿ ಮನೆಗೆ ಹೇಗೆ ಹೋಗುವೆ ಎಂದು ನಾನು ನೋಡಿಕೊಳ್ಳುತ್ತೇನೆʼ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಜಸ್ಟಿಸ್ ಶಿವಾಂಗಿ ಮಂಗಳಾ ಅವರು ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿದ್ದಾರೆ ಮತ್ತು ಸೆಕ್ಷನ್ 437A CrPC ಅಡಿಯಲ್ಲಿ ಜಾಮೀನು ಬಾಂಡ್ಗಳನ್ನು ಒದಗಿಸುವಂತೆ ನಿರ್ದೇಶಿಸಿದ್ದಾರೆ.
ʼಇದರ ನಂತರ ಅಪರಾಧಿ ಮತ್ತು ವಕೀಲ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದು, ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದಾರೆʼ ಎಂದು ನ್ಯಾಯಾಧೀಶೆ ಮಂಗಳಾ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿಯನ್ನು ಖುಲಾಸೆಗೊಳಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ನ್ಯಾಯಾಲಯ ಆರೋಪಿಯ ಪರ ವಕೀಲ ಅತುಲ್ ಕುಮಾರ್ಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ, ನಿಮ್ಮ ವಿರುದ್ಧ ಕ್ರಿಮಿನಲ್ ನಿಂದನೆ ಪ್ರಕ್ರಿಯೆಗಳನ್ನು ಏಕೆ ಪ್ರಾರಂಭಿಸಬಾರದು ಎಂದು ವಿವರಿಸುವಂತೆ ಕೇಳಿದೆ.







