ತೆಲಂಗಾಣ ಸುರಂಗ ಕುಸಿತ | ವಿಜ್ಞಾನಿಗಳ ಸಲಹೆಯಂತೆ ಕಾರ್ಯಾಚರಣೆಗೆ ಮುಂದಾದ ರಕ್ಷಣಾ ತಂಡಗಳು

Photo : PTI
ನಾಗರಕರ್ನೂಲ್: ರಡಾರ್ ಸಮೀಕ್ಷೆಯ ನಂತರ, ವಿಜ್ಞಾನಿಗಳು ಗುರುತಿಸಿರುವ ಸ್ಥಳಗಳಲ್ಲಿ ಮನುಷ್ಯರ ಉಪಸ್ಥಿತಿಯನ್ನು ಪತ್ತೆ ಹಚ್ಚಲು ತೆಲಂಗಾಣ ಸುರಂಗ ಕುಸಿತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ರಕ್ಷಣಾ ತಂಡಗಳು ಮುಂದಾಗಿವೆ. ಇದಕ್ಕೂ ಮುನ್ನ, ರಡಾರ್ ಸಮೀಕ್ಷೆಯಲ್ಲಿ ಕೇವಲ ಲೋಹಗಳು ಹಾಗೂ ಇನ್ನಿತರ ಸ್ಥಳಗಳು ಮಾತ್ರ ಪತ್ತೆಯಾಗಿದ್ದವು ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸುರಂಗದೊಳಗೆ ಮನುಷ್ಯರ ಉಪಸ್ಥಿತಿಯ ಸುಳಿವನ್ನು ಪತ್ತೆ ಹಚ್ಚಲು ಹೈದರಾಬಾದ್ ನ ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ(NGRI)ಯ ವಿಜ್ಞಾನಿಗಳು ನೆಲ ಕೊರೆಯುವ ರಡಾರ್ ಸಮೀಕ್ಷೆಯನ್ನು ಕೈಗೊಂಡರು.
“ವಿಜ್ಞಾನಿಗಳು ಸೂಚಿಸಿರುವ ಇನ್ನಿತರ ಸ್ಥಳಗಳಲ್ಲಿ ರಕ್ಷಣಾ ತಂಡದ ಸದಸ್ಯರು ಮನುಷ್ಯರ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ. ಮತ್ಯಾವುದೇ ಸ್ಥಳದಲ್ಲಿ ಮತ್ತೊಮ್ಮೆ ನೆಲ ಕೊರೆಯುವ ರಡಾರ್ ಸಮೀಕ್ಷೆಯನ್ನು ನಡೆಸಲು ವಿಜ್ಞಾನಿಗಳು ಸಿದ್ಧರಾಗಿದ್ದಾರೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುರಂಗದಲ್ಲಿ ಕೆಸರು ಹಾಗೂ ನೀರು ತುಂಬಿಕೊಂಡು ಸವಾಲಿನ ವಾತಾವರಣ ನಿರ್ಮಾಣವಾಗಿರುವುದರಿಂದ, ರಕ್ಷಣಾ ಸಿಬ್ಬಂದಿಗಳು ಹಾಗೂ ವಿಜ್ಞಾನಿಗಳ ಪ್ರಯತ್ನಗಳು ಮತ್ತಷ್ಟು ಜಟಿಲಗೊಂಡಿವೆ. ಆದರೆ, ಪರಿಸ್ಥಿತಿ ಸುಧಾರಿಸುತ್ತಿದ್ದು, ವಿಜ್ಞಾನಿಗಳು ಮತ್ತೊಮ್ಮೆ ಸಮೀಕ್ಷೆ ಕೈಗೊಳ್ಳಲು ಸಿದ್ಧರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ವೈಪರೀತ್ಯಗಳನ್ನು ಗುರುತಿಸಿದ್ದ ಸ್ಥಳಗಳಲ್ಲಿ ರಂಧ್ರವನ್ನೂ ಕೊರೆಯಲಾಗಿದ್ದು, ಅಲ್ಲಿ ಕೇವಲ ಲೋಹದ ವಸ್ತುಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.
ರವಿವಾರ ಸುರಂಗಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಎಂಟು ಕಾರ್ಮಿಕರು ಸಿಲುಕಿಕೊಂಡಿರುವ ನಿಖರ ಸ್ಥಳವನ್ನು ಇನ್ನೂ ಪತ್ತೆಯಾಗಿಲ್ಲ. ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.







