FACT CHECK | ಭಾರತೀಯರು ಪ್ರವಾಸ ರದ್ದುಗೊಳಿಸದಂತೆ ಟರ್ಕಿ ಬಹಿರಂಗ ಪ್ರಕಟನೆ ನೀಡಿಲ್ಲ

PC :altnews.in
ಹೊಸದಿಲ್ಲಿ: ತನ್ನ ದೇಶಕ್ಕೆ ಪ್ರವಾಸಗಳನ್ನು ರದ್ದುಗೊಳಿಸದಂತೆ ಭಾರತೀಯ ಪ್ರಯಾಣಿಕರನ್ನು ಆಗ್ರಹಿಸಿ ಟರ್ಕಿಯ ‘ಪ್ರವಾಸೋದ್ಯಮ ಇಲಾಖೆ’ಯು ಹೊರಡಿಸಿದೆಯೆನ್ನಲಾದ ‘ಬಹಿರಂಗ ಪ್ರಕಟಣೆ’ಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಟರ್ಕಿಯ ಧ್ವಜವನ್ನು ಹೊಂದಿರುವ ಪ್ರಕಟಣೆಯಲ್ಲಿ,‘ಹೆಚ್ಚಿನ ಸಂಖ್ಯೆಯ ಸ್ಥಳೀಯರಿಗೆ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ ಬಗ್ಗೆ ತಿಳಿದಿಲ್ಲ,ಹೀಗಾಗಿ ಟರ್ಕಿಗೆ ಪ್ರವಾಸವನ್ನು ಮುಂದೂಡಲು ಅಥವಾ ರದ್ದುಗೊಳಿಸಲು ಯಾವುದೇ ಕಾರಣವಿಲ್ಲ. ಭಾರತೀಯ ಪ್ರವಾಸಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುವ ಯಾವುದೇ ನಿರ್ಬಂಧ ಅಥವಾ ಸುರಕ್ಷತಾ ಸಮಸ್ಯೆಗಳಿಲ್ಲ ಎಂದು ಈ ಬಹಿರಂಗ ಪ್ರಕಟಣೆಯಲ್ಲಿ ಹೇಳಲಾಗಿದೆ.
ಇತ್ತೀಚಿನ ಸಂಘರ್ಷದಲ್ಲಿ ಟರ್ಕಿ ಪಾಕಿಸ್ತಾನವನ್ನು ಬೆಂಬಲಿಸಿದ್ದ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ ಹಿನ್ನೆಲೆಯಲ್ಲಿ ಆ ದೇಶವನ್ನು ಬಹಿಷ್ಕರಿಸುವಂತೆ ಕರೆಗಳು ಹೆಚ್ಚುತ್ತಿರುವ ನಡುವೆಯೇ ಈ ಟಿಪ್ಪಣಿ ಹೊರಬಿದ್ದಿದೆ. ಭಾರತೀಯರು ಹಲವಾರು ಪ್ರವಾಸ ಸಂಸ್ಥೆಗಳ ಮೂಲಕ ಬುಕ್ ಮಾಡಿದ್ದ ತಮ್ಮ ಟರ್ಕಿ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ. ದಿಲ್ಲಿಯ ಜೆಎನ್ಯು ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಕೂಡ ತಮ್ಮ ದೇಶದೊಂದಿಗೆ ಏಕತೆಯನ್ನು ವ್ಯಕ್ತಪಡಿಸಿ ಟರ್ಕಿಯ ಸಂಸ್ಥೆಗಳೊಂದಿಗೆ ತಮ್ಮ ಪಾಲುದಾರಿಕೆಯನ್ನು ಸ್ಥಗಿತಗೊಳಿಸಿವೆ. ಈ ‘ಬಹಿರಂಗ ಪ್ರಕಟಣೆ’ಯನ್ನು ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು ಟರ್ಕಿಯು ಭಾರತೀಯ ಪ್ರವಾಸಿಗಳನ್ನು ‘ಭಿಕ್ಷೆ ಬೇಡುತ್ತಿದೆ ’ಎಂದು ಪರೋಕ್ಷವಾಗಿ ಸೂಚಿಸಿದ್ದರು.
ಈ ಪ್ರಕಟಣೆಯನ್ನು ಭಾರತದಾದ್ಯಂತ ಸುದ್ದಿಸಂಸ್ಥೆಗಳು ಪ್ರಮುಖವಾಗಿ ವರದಿ ಮಾಡಿದ್ದವು. ಕೇರಳ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ ಚಂದ್ರಶೇಖರ,ಕಾಂಗ್ರೆಸ್ ನಾಯಕ ರಾಜೀವ ಶುಕ್ಲಾ,ಶಿವಸೇನೆಯ ನಾಯಕಿ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಹಲವಾರು ರಾಜಕಾರಣಿಗಳು,ವೀರ ಸಾಂಘ್ವಿ ಮತ್ತು ರೋಹಿಣಿ ಸಿಂಗ್ ಸೇರಿದಂತೆ ಪತ್ರಕರ್ತರು ಟರ್ಕಿಯನ್ನು ಟೀಕಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಗಳನ್ನು ಮಾಡಿದ್ದರು.
ಫ್ಯಾಕ್ಟ್ ಚೆಕ್
ಟರ್ಕಿಯ ‘ಬಹಿರಂಗ ಪ್ರಕಟಣೆ’ಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮುಂದಾದ ಫ್ಯಾಕ್ಟ್ ಚೆಕ್ ಜಾಲತಾಣ ‘ಆಲ್ಟ್ ನ್ಯೂಸ್’ ಟರ್ಕಿ ಸರಕಾರದ ಅಧಿಕೃತ ಸಾಮಾಜಿಕ ಜಾಲತಾಣ ಹ್ಯಾಂಡಲ್ಗಳನ್ನು ಜಾಲಾಡಿದಾಗ ಅಂತಹ ಯಾವುದೇ ಪ್ರಕಟಣೆ ಅಥವಾ ಪತ್ರ ಅವುಗಳಲ್ಲಿ ಕಂಡು ಬಂದಿಲ್ಲ. ಬಹಿರಂಗ ಪ್ರಕಟಣೆಯಲ್ಲಿ ಟರ್ಕಿ ಸರಕಾರದ ‘ಪ್ರವಾಸೋದ್ಯಮ ಇಲಾಖೆ’ಯು ಅದನ್ನು ಹೊರಡಿಸಿದೆಯೆಂದು ಹೇಳಲಾಗಿದೆ,ಆದರೆ ಅಂತಹ ಯಾವುದೇ ಇಲಾಖೆ ಟರ್ಕಿ ಸರಕಾರದಲ್ಲಿ ಇಲ್ಲ,ಅಲ್ಲಿರುವುದು ಅಧಿಕೃತ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಮಾತ್ರ ಎಂದು ಆಲ್ಟ್ನ್ಯೂಸ್ ಬೆಟ್ಟು ಮಾಡಿದೆ.
ಟರ್ಕಿ ಮೂಲದ ಸತ್ಯಶೋಧನೆ ಸಂಸ್ಥೆ ‘ಮಾಲುಮಟ್ಫುರುಸ್’ ಕೂಡ ಪ್ರಕಟಣೆಯು ನಕಲಿ ಎಂದು ಎಕ್ಸ್ ಪೋಸ್ಟ್ನಲ್ಲಿ ದೃಢಪಡಿಸಿದೆ.
ಆಲ್ಟ್ನ್ಯೂಸ್ ಟರ್ಕಿಯ ಸಂಸೃತಿ ಮತ್ತು ಪ್ರವಾಸೋದ್ಯಮ ಇಲಾಖೆಯನ್ನು ಸಂಪರ್ಕಿಸಿದ್ದು,ಇಂತಹ ಪ್ರಕಟಣೆಯನ್ನು ತಾನು ಹೊರಡಿಸಿಯೇ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.







