ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯ ಕೆದಕಿದ ತುರ್ಕಿಯೆ ಅಧ್ಯಕ್ಷ ಎರ್ದೊಗಾನ್

ರಿಸೆಪ್ ತಯ್ಯಿಪ್ ಎರ್ದೊಗಾನ್ | PC : PTI
ವಿಶ್ವಸಂಸ್ಥೆ,ಸೆ.24: ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮದಿಂದ ತನ್ನ ದೇಶವು ಸಂತೋಷಗೊಂಡಿದೆ ಎಂದು ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದ ತುರ್ಕಿಯೆ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಅವರು ಜೊತೆಗೆ ಕಾಶ್ಮೀರ ವಿಷಯವನ್ನೂ ಕೆದಕಿದ್ದು, ಕಾಶ್ಮೀರ ಸಮಸ್ಯೆಯ ಪರಿಹಾರಕ್ಕೆ ಕರೆ ನೀಡಿದ್ದಾರೆ.
‘ಕಳೆದ ಎಪ್ರಿಲ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯು ಸಂಘರ್ಷಕ್ಕೆ ತಿರುಗಿದ ಬಳಿಕ ಕದನ ವಿರಾಮ ಏರ್ಪಟ್ಟಿರುವುದು ನಮಗೆ ಸಂತಸವನ್ನುಂಟು ಮಾಡಿದೆ. ಕಾಶ್ಮೀರ ವಿಷಯವನ್ನು ಅಲ್ಲಿರುವ ನಮ್ಮ ಸೋದರರು ಮತ್ತು ಸೋದರಿಯರ ಹಿತರಕ್ಷಣೆಗಾಗಿ ವಿಶ್ವಸಂಸ್ಥೆಯ ನಿರ್ಣಯಗಳ ಆಧಾರದಲ್ಲಿ ಮಾತುಕತೆಯ ಮೂಲಕ ಬಗೆಹರಿಸಬೇಕು ಎಂದು ನಾವು ಬಯಸಿದ್ದೇವೆ ’ಎಂದು ಎರ್ದೊಗಾನ್ ಹೇಳಿದರು.
ವಿಶ್ವಸಂಸ್ಥೆಯಲ್ಲಿ ಎರ್ದೊಗಾನ್ ಕಾಶ್ಮೀರ ವಿಷಯವನ್ನು ಎತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಭಾರತವು ಅವಿಭಾಜ್ಯ ಅಂಗವಾಗಿರುವ ಬ್ರಿಕ್ಸ್ ಬಣವನ್ನು ಸೇರಲು ತುರ್ಕಿಯೆ ಪ್ರಯತ್ನಗಳ ನಡುವೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರನ್ನು ಉಲ್ಲೇಖಿಸುವುದರಿಂದ ಎರ್ದೊಗಾನ್ ದೂರವುಳಿದಿದ್ದರು.
ಆದರೆ, ಈ ವರ್ಷದ ಆರಂಭದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತುರ್ಕಿಯೆ ಅಧ್ಯಕ್ಷರು ಮಾತುಕತೆ ಮತ್ತು ವಿಶ್ವಸಂಸ್ಥೆ ನಿರ್ಣಯದ ಮೂಲಕ ಕಾಶ್ಮೀರ ವಿಷಯದಲ್ಲಿ ಪರಿಹಾರಕ್ಕಾಗಿ ಕರೆ ನೀಡಿದ್ದರು.
‘ವಿಶ್ವಸಂಸ್ಥೆಯ ನಿರ್ಣಯಕ್ಕೆ ಅನುಗುಣವಾಗಿ ಮಾತುಕತೆಯ ಮೂಲಕ ಹಾಗೂ ಕಾಶ್ಮೀರದ ಜನರ ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಕಾಶ್ಮೀರ ವಿಷಯವನ್ನು ಬಗೆಹರಿಸಬೇಕು. ನಮ್ಮ ಸರಕಾರ ಮತ್ತು ದೇಶ ಈ ಹಿಂದಿನಂತೆ ಇಂದೂ ನಮ್ಮ ಕಾಶ್ಮೀರಿ ಸೋದರರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ’ಎಂದು ಎರ್ದೊಗಾನ್ ಹೇಳಿದರು.
ತುರ್ಕಿಯೆ ಅಧ್ಯಕ್ಷರ ಹೇಳಿಕೆಗಳನ್ನು ಭಾರತವು ಬಲವಾಗಿ ವಿರೋಧಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಎರ್ದೊಗಾನ್ ಅವರ ಆಕ್ಷೇಪಾರ್ಹ ಹೇಳಿಕೆಗಳನ್ನು ಭಾರತವು ತಿರಸ್ಕರಿಸಿದೆ.
ಜಮ್ಮುಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಅದರ ಕುರಿತು ಹೇಳಿಕೆ ನೀಡಲು ಬೇರೆ ಯಾವುದೇ ದೇಶಕ್ಕೆ ಹಕ್ಕು ಇಲ್ಲ. ಇನ್ನೊಂದು ದೇಶದ ಆಂತರಿಕ ವ್ಯವಹಾರಗಲ್ಲಿ ಮೂಗು ತೂರಿಸುವ ಬದಲು ಜಮ್ಮುಕಾಶ್ಮೀರದ ಜನರಿಗೆ ದೊಡ್ಡ ಬೆದರಿಕೆಯಾಗಿರುವ ಗಡಿಯಾಚೆಯ ಭಯೋತ್ಪಾದನೆಯನ್ನು ಭಾರತದ ವಿರುದ್ಧ ಬಳಸುವ ಪಾಕಿಸ್ತಾನದ ನೀತಿಯನ್ನು ಖಂಡಿಸಿದ್ದರೆ ಸೂಕ್ತವಾಗಿರುತ್ತಿತ್ತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಹೇಳಿದ್ದಾರೆ.







