ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಕಾಶ್ಮೀರಕ್ಕೆ ಭೇಟಿ ನೀಡಿ; ಪ್ರಧಾನಿ ಮೋದಿಗೆ ಬಾಲಕಿಯರಿಂದ ಆಹ್ವಾನ

Courtesy: PTI
ಅನಂತನಾಗ್: ಕಣಿವೆ ರಾಜ್ಯದ ಸೌಂದರ್ಯವನ್ನು ವೀಕ್ಷಿಸುವಂತೆ ಹಾಗೂ ಪ್ರವಾಸ ಸಂತ್ರಸ್ತರಿಗೆ ನೆರವು ಒದಗಿಸುವಂತೆ ಅವಳಿ ಬಾಲಕಿಯರು ಪ್ರಧಾನಿ ನರೇಂದ್ರ ಮೋದಿಗೆ ನೀಡಿರುವ ಆಹ್ವಾನದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಎಂಟು ವರ್ಷದ ಝೈನಬ್ ಹಾಗೂ ಝೈಬಾ, ದಕ್ಷಿಣ ಕಾಶ್ಮೀವರದ ಕೋಕರ್ನಾಗ್ ಪ್ರದೇಶದ ನಿವಾಸಿಗಳಾಗಿದ್ದು, ಬಿಜೆಪಿ ನಾಯಕ ರವೀಂದರ್ ರೈನಾರೊಂದಿಗೆ ಅವರಿಬ್ಬರೂ ಮಾತನಾಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ಭಾರಿ ಪ್ರಮಾಣದ ನಷ್ಟ ಅನುಭವಿಸಿದ ತೋಟಗಾರಿಕಾ ವರ್ತಕರೊಂದಿಗೆ ಸಂವಾದ ನಡೆಸಲು ರವೀಂದರ್ ರೈನಾ ಜಬ್ಲಿಪೋರದಲ್ಲಿನ ಹಣ್ಣುಗಳ ಮಂಡಿಗೆ ಭೇಟಿ ನೀಡಿದ್ದರು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಕ್ಕೆ ಭೇಟಿ ನೀಡಬೇಕು ಹಾಗೂ ಅದರ ಸೌಂದರ್ಯವನ್ನು ವೀಕ್ಷಿಸಬೇಕು ಎಂದು ಈ ಅವಳಿ ಬಾಲಕಿಯರು ಮನವಿ ಮಾಡಿದ್ದರು.
ಈ ಪ್ರದೇಶದಲ್ಲಿ ಹಣ್ಣುಗಳನ್ನು ಸಂಗ್ರಹಿಸಿಡಲು ಶೀತಲ ಸಂಗ್ರಹಾಗಾರವನ್ನು ಸ್ಥಾಪಿಸಬೇಕು ಎಂದೂ ಈ ಬಾಲಕಿಯರು ಮನವಿ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ, “ನಿಮಗೆ ಶೀತಲ ಸಂಗ್ರಹಾಗಾರ ಬೇಕೆ?” ಎಂದು ರವೀಂದರ್ ರೈನಾ ಆ ಬಾಲಕಿಯರನ್ನು ಪ್ರಶ್ನಿಸಿದ್ದರು. ಅವರ ಪ್ರಶ್ನೆಗೆ ಬಾಲಕಿಯರು ಹೌದೆಂದು ಉತ್ತರಿಸಿದ್ದರು.
“ಸೇಬು ನಮ್ಮ ಹಣ್ಣಾಗಿದ್ದು, ಅದನ್ನು ಭಾರತದ ಜನತೆಯೂ ಇಷ್ಟಪಡುವುದರಿಂದ, ನಾವು ಅದನ್ನು ಸಂಗ್ರಹಿಸಿಡಲು ಶೀತಲ ಸಂಗ್ರಹಾಗಾರ ಬೇಕಿದೆ” ಎಂದು ಝೈನಬ್ ಮನವಿ ಮಾಡಿದ್ದಳು.
“ಪ್ರತಿ ದಿನ ಒಂದು ಸೇಬು ಸೇವಿಸುವುದರಿಂದ ವೈದ್ಯರನ್ನು ದೂರ ಇಡಬಹುದು” ಎಂದು ಆಕೆ ಹೇಳಿದಾಗ, ಅಲ್ಲಿದ್ದವರೆಲ್ಲ ನಗೆಗಡಲಲ್ಲಿ ಮುಳುಗಿದ್ದರು.
#Watch: Ravinder Raina with #Zaiba_Zainab at Anantnag@RavinderRaina @BJP4JnK @BJP4India pic.twitter.com/zk32RmpFYc
— Morning Kashmir (@morningkashmirX) September 21, 2025







