ನೊಯ್ಡಾ ವರದಕ್ಷಿಣೆ ಪ್ರಕರಣ | ಮೃತ ನಿಕ್ಕಿ ಭಾಟಿಯಾ ಮಾವನ ಕುಟುಂಬದಿಂದ ಪ್ರತ್ಯಾರೋಪ: ಪ್ರಕರಣಕ್ಕೆ ಹೊಸ ತಿರುವು

PC : NDTV
ನೊಯ್ಡಾ: ನೊಯ್ಡಾ ವರದಕ್ಷಿಣೆ ಸಾವು ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ನಿಕ್ಕಿ ಭಾಟಿಯಾರ ಮಾವಂದಿರ ಕುಟುಂಬವು ಅವರ ಪೋಷಕರ ಕುಟುಂಬದ ಮೇಲೆ ವರದಕ್ಷಿಣೆ ಕಿರುಕುಳದ ಪ್ರತ್ಯಾರೋಪ ಮಾಡಿದೆ.
ನಿಕ್ಕಿ ಭಾಟಿಯಾರ ಸಹೋದರ ರೋಹಿತ್ ಪಾಯ್ಲಾರನ್ನು ತೊರೆದಿರುವ ಅವರ ನಾದಿನಿ ಮೀನಾಕ್ಷಿ ಕೂಡಾ ಅವರ ಕುಟುಂಬದ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ.
31 ವರ್ಷದ ರೋಹಿತ್ ಹಾಗೂ ಕಾಮಾಕ್ಷಿ 2016ರಲ್ಲಿ ವಿವಾಹವಾಗಿದ್ದರು. ಪಲ್ಲಾ ಗ್ರಾಮದ ಮೀನಾಕ್ಷಿಯ ಪ್ರಕಾರ, ಅವರ ಕುಟುಂಬವು ರೋಹಿತ್ ಗೆ ಮಾರುತಿ ಸಿಯಾಝ್ ಕಾರನ್ನು ವರದಕ್ಷಿಣೆಯನ್ನಾಗಿ ನೀಡಿತ್ತು. ಆದರೆ, ಆ ಕಾರು ಅಪಶಕುನವೆಂದು ರೋಹಿತ್ ಕುಟುಂಬವು ಅದನ್ನು ಮಾರಾಟ ಮಾಡಿತ್ತು. ನಂತರ ರೋಹಿತ್ ಕುಟುಂಬವು ನೂತನ ಮಾದರಿಯ ಸ್ಕಾರ್ಪಿಯೊ ಕಾರು ಹಾಗೂ ಹಣಕ್ಕೆ ಬೇಡಿಕೆ ಇಟ್ಟಿತ್ತು. ಆದರೆ, ಆ ಬೇಡಿಕೆಯನ್ನು ನಿರಾಕರಿಸಿದ್ದರಿಂದ, ರೋಹಿತ್ ಕುಟುಂಬವು ನನ್ನನ್ನು ತವರಿಗೆ ವಾಪಸು ಕಳಿಸಿತ್ತು ಎಂದು ಆರೋಪಿಸಿದ್ದಾರೆ.
ಈ ವಿಷಯವನ್ನು ಗ್ರಾಮ ಪಂಚಾಯತಿಯ ಬಳಿಗೆ ತೆಗೆದುಕೊಂಡು ಹೋದಾಗ, ಮೀನಾಕ್ಷಿ ಮರುವಿವಾಹವಾಗಲು ವಿವಾಹಕ್ಕಾಗಿ ಖರ್ಚು ಮಾಡಿರುವ 35 ಲಕ್ಷ ರೂ. ಅನ್ನು ಮೀನಾಕ್ಷಿ ಕುಟುಂಬಕ್ಕೆ ಮರಳಿಸಬೇಕು ಇಲ್ಲವೆ, ಮೀನಾಕ್ಷಿಯನ್ನು ತಮ್ಮ ಮನೆಗೆ ಕರೆದೊಯ್ಯಬೇಕು ಎಂದು ರೋಹಿತ್ ಕುಟುಂಬಕ್ಕೆ ಸೂಚನೆ ನೀಡಿತ್ತು. ಆದರೆ, ಮೀನಾಕ್ಷಿಯನ್ನು ತಮ್ಮ ಸೊಸೆಯನ್ನಾಗಿ ಸ್ವೀಕರಿಸಲು ರೋಹಿತ್ ಕುಟುಂಬ ನಿರಾಕರಿಸಿತ್ತು ಎಂದು ಹೇಳಲಾಗಿದೆ.
ಈ ಸಮಸ್ಯೆ ಬಗೆಹರಿಯದೆ ಉಳಿದಿದ್ದು, ನಿಕ್ಕಿ ಭಾಟಿಯಾರ ತಂದೆ ಭಿಖಾರಿ ಸಿಂಗ್ ಪಾಯ್ಲಾ ಹಾಗೂ ಇನ್ನಿತರ ಕುಟುಂಬದ ಸದಸ್ಯರು ಮೀನಾಕ್ಷಿಯನ್ನು ತಮ್ಮ ಸೊಸೆಯನ್ನಾಗಿ ಎಂದೂ ಸ್ವೀಕರಿಸಿರಲಿಲ್ಲ. ಈ ಕುರಿತು ನಿಕ್ಕಿ ಭಾಟಿಯಾರ ಸಹೋದರ ರೋಹಿತ್ ನನ್ನು ಪ್ರಶ್ನಿಸಿದಾಗ, ಆತ ತಮ್ಮ ಬೇರ್ಪಟ್ಟಿರುವ ಪತ್ನಿಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. “ಇವೆಲ್ಲ ಕೇವಲ ಆರೋಪಗಳು ಮಾತ್ರ” ಎಂದಷ್ಟೇ ಅವರು ಉತ್ತರಿಸಿದ್ದಾರೆ.
ಆದರೆ, ಅವರ ಕುಟುಂಬದ ಮತ್ತೋರ್ವ ವ್ಯಕ್ತಿ ಮಾತ್ರ, ಪಾಯ್ಲಾ ಕುಟುಂಬವನ್ನು ಸಮರ್ಥಿಸಿಕೊಂಡಿದ್ದು, ಪ್ರತಿ ಕುಟುಂಬಗಳಲ್ಲೂ ಕಲಹಗಳು ನಡೆಯುತ್ತವೆ. ಆದರೆ, ನಾವು ಕನಿಷ್ಠ ಯುವತಿಗೆ ಬೆಂಕಿ ಹಚ್ಚುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಬಂಧಿತರಾಗಿರುವ ನಿಕ್ಕಿ ಭಾಟಿಯಾರ ಮಾವ ಸತ್ಯವೀರ್ ಸಿಂಗ್, ಹಣ ಮರಳಿಸುವುದನ್ನು ಖಾತರಿಪಡಿಸಲು ನಾನು ನನ್ನ ವೈಯಕ್ತಿಕ ಪ್ರತಿಷ್ಠೆಯನ್ನು ಬಳಸುವುದಾಗಿ ಭಿಖಾರಿ ಸಿಂಗ್ ಪಾಯ್ಲಾ ತಮಗೆ ಭರವಸೆ ನೀಡಿದ್ದರು ಎಂದು ಹೇಳಿದ್ದಾರೆ. ಮೀನಾಕ್ಷಿ ಪ್ರಕರಣದಲ್ಲಿ ನಾನು ಹಲವು ಬಾರಿ ಮಧ್ಯವಪ್ರವೇಶಿಸಿದ್ದೆ ಹಾಗೂ ಈ ಸಮಸ್ಯೆಯನ್ನು ಪರಿಹರಿಸುವಂತೆ ಪದೇ ಪದೇ ಆಗ್ರಹಿಸಿದ್ದೆ ಎಂದೂ ಅವರು ಹೇಳಿದ್ದಾರೆ.







