ಮನೆಯೆದುರು ನಿಲ್ಲಿಸಿದ್ದ ಕಾರಿನೊಳಗೆ ಸಿಲುಕಿಕೊಂಡು ಇಬ್ಬರು ಮಕ್ಕಳು ಉಸಿರುಗಟ್ಟಿ ಮೃತ್ಯು

ಸಾಂದರ್ಭಿಕ ಚಿತ್ರ | PC : freepik.com
ಹೈದರಾಬಾದ್: ತಮ್ಮ ಅಜ್ಜಿ-ತಾತನ ಮನೆಯೆದುರು ನಿಲ್ಲಿಸಲಾಗಿದ್ದ ಕಾರಿನೊಳಗೆ ಸಿಲುಕಿಕೊಂಡ ಇಬ್ಬರು ಮಕ್ಕಳು, ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಸೋಮವಾರ ಮಧ್ಯಾಹ್ನ ಚೆವೆಲ್ಲಾದಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಅಭಿನಯ ಶ್ರೀ (4) ಹಾಗೂ ತನ್ಮಯ ಶ್ರೀ (5) ಎಂದು ಗುರುತಿಸಲಾಗಿದೆ.
"ಚಿಕ್ಕಪ್ಪನಿಗೆ ವಧು ನೋಡುವ ಕಾರ್ಯಕ್ರಮವಿದ್ದುದರಿಂದ ಮಕ್ಕಳು ತಮ್ಮ ಪೋಷಕರೊಂದಿಗೆ ಅಜ್ಜ-ಅಜ್ಜಿಯ ಮನೆಗೆ ಆಗಮಿಸಿದ್ದರು. ಈ ಘಟನೆ ಸೋಮವಾರ ಮಧ್ಯಾಹ್ನ ಸುಮಾರು 1.30 ಗಂಟೆಗೆ ನಡೆದಿದೆ", ಎಂದು ಚೆವೆಲ್ಲಾ ಪೊಲೀಸರು ತಿಳಿಸಿದ್ದಾರೆ.
"ಮಕ್ಕಳು ಮನೆಯ ಹೊರಗೆ ಆಟವಾಡುತ್ತಿದ್ದಾಗ, ಅವರ ಕುಟುಂಬದ ಸದಸ್ಯರು ಮನೆಯೊಳಗಿದ್ದರು. ಈ ವೇಳೆ ಮನೆಯೆದುರು ನಿಂತಿದ್ದ ಕಾರಿನೊಳಗೆ ಮಕ್ಕಳು ಪ್ರವೇಶಿಸಿದ್ದು, ಅವರು ಕಾರಿನೊಳಗೆ ಪ್ರವೇಶಿಸುತ್ತಿದ್ದಂತೆಯೇ, ಅದರ ಬಾಗಿಲು ಲಾಕ್ ಆಗಿದೆ" , ಎಂದು ಅವರು ಹೇಳಿದ್ದಾರೆ.
ಸುಮಾರು ಒಂದು ಗಂಟೆಯ ನಂತರ, ಮಕ್ಕಳು ಕಾಣೆಯಾಗಿರುವುದನ್ನು ಗಮನಿಸಿದ ಪೋಷಕರು, ಅವರಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ. ಎಲ್ಲ ಸ್ಥಳಗಳಲ್ಲಿ ಅವರಿಗಾಗಿ ಹುಡುಕಾಟ ನಡೆಸಿದ ನಂತರ, ಅವರು ಕಾರಿನೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿರುವುದನ್ನು ಪತ್ತೆ ಹಚ್ಚಿದ್ದಾರೆ. ತಕ್ಷಣವೇ ಕಾರಿನ ಬಾಗಿಲು ತೆರೆದಿರುವ ಪೋಷಕರು, ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಯೊಂದಕ್ಕೆ ಸಾಗಿಸಿದ್ದಾರೆ. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ದೂರು ದಾಖಲಿಸಲು ಮೃತ ಮಕ್ಕಳ ಕುಟುಂಬದ ಸದಸ್ಯರು ನಿರಾಕರಿಸಿದ್ದಾರೆ.