ಸುಲಿಗೆ ಆರೋಪ : ಝೀ ರಾಜಸ್ಥಾನ ಚಾನಲ್‌ನ ಮಾಜಿ ಪತ್ರಕರ್ತ ಸೇರಿದಂತೆ ಇಬ್ಬರ ಬಂಧನ

ಜೈಪುರ : ಸುಲಿಗೆ ಆರೋಪದಲ್ಲಿ ಝೀ ರಾಜಸ್ಥಾನ ಚಾನಲ್‌ನ ಮಾಜಿ ಪತ್ರಕರ್ತ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಝೀ ರಾಜಸ್ಥಾನ ಸುದ್ದಿ ವಾಹಿನಿಯಲ್ಲಿ ವರದಿಗಾರನಾಗಿದ್ದ ರಾಮ್ ಸಿಂಗ್ ರಾಜವತ್ ಮತ್ತು ಜಿತೇಂದ್ರ ಶರ್ಮಾ ಅವರನ್ನು ಬಂಧಿಸಲಾಗಿದೆ.
ಝೀ ಚಾನೆಲ್ ಆಡಳಿತ ಮಂಡಳಿಯು ಕಳೆದ ತಿಂಗಳು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಚಾನಲ್‌ನ ಪ್ರಾದೇಶಿಕ ಮುಖ್ಯಸ್ಥ ಆಶಿಶ್ ದೇವ್ ಮತ್ತು ಇತರರ ವಿರುದ್ಧ ವಂಚನೆ ಸೇರಿದಂತೆ ಇತರ ಆರೋಪಗಳಡಿಯಲ್ಲಿ ಪ್ರಕರಣ ದಾಖಲಿಸಿತ್ತು.
ರಾಜವತ್ ಮತ್ತು ಶರ್ಮಾ ಅವರು ದೇವ್ ಅವರ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು. ಉದ್ಯಮಿಗಳ ವಿರುದ್ಧ ಸುದ್ದಿ ವರದಿಗಳನ್ನು ಪ್ರಸಾರ ಮಾಡಿ ಹಣ ಪಾವತಿಸುವಂತೆ ಒತ್ತಾಯಿಸುತ್ತಿದ್ದರು ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳು ಬಿಲ್ಡರ್‌ಗಳು, ಗಣಿಧನಿಗಳು, ಖಾಸಗಿ ಆಸ್ಪತ್ರೆಗಳು ಮತ್ತು ಕಂಪನಿಗಳಿಂದ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ.
ದೇವ್ ಮತ್ತು ಇತರರ ವಿರುದ್ಧ ಚಾನೆಲ್‌ಗೆ ಹಲವಾರು ದೂರುಗಳು ಬಂದ ನಂತರ ಈ ಅವ್ಯವಹಾರ ಬೆಳಕಿಗೆ ಬಂದಿದೆ. ಚಾನಲ್‌ನ ಪ್ರಧಾನ ಕಚೇರಿಯ ತಂಡವೊಂದು ಪ್ರಾದೇಶಿಕ ಕಚೇರಿಗೆ ಭೇಟಿ ನೀಡಿ ಆಂತರಿಕ ಪರಿಶೀಲನೆ ನಡೆಸಿದೆ. ಈ ವೇಳೆ ಶರ್ಮಾ ಲಾಕರ್‌ನಿಂದ 5 ಲಕ್ಷ ರೂ.ಗಳೊಂದಿಗೆ ಪರಾರಿಯಾಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಬೆನ್ನಲ್ಲೇ ಚಾನೆಲ್ ಆಡಳಿತ ಮಂಡಳಿಯು ದೇವ್, ರಾಜಾವತ್ ಮತ್ತು ಶರ್ಮಾ ಅವರನ್ನು ರಾಜೀನಾಮೆ ನೀಡುವಂತೆ ಸೂಚಿಸಿತ್ತು.







