ಕಾಶಿ ಕಾಲೇಜು ಆವರಣದ ಮಸೀದಿಗೆ ಎರಡು ಬೀಗಮುದ್ರೆ

PC: x.com/PTI_News
ವಾರಾಣಾಸಿ: ಇಲ್ಲಿನ ಉದಯ ಪ್ರತಾಪ್ ಕಾಲೇಜು ಕ್ಯಾಂಪಸ್ ನಲ್ಲಿರುವ ಮಸೀದಿಯ ಭೂಮಿಯ ಮೇಲೆ ವಕ್ಫ್ ಮಂಡಳಿ ಹಕ್ಕು ಪ್ರತಿಪಾದನೆ ಮಾಡಿದ ಹಿನ್ನೆಲೆಯಲ್ಲಿ ಉದ್ಭವಿಸಿರುವ ವಿವಾದದಿಂದಾಗಿ ಕಾಲೇಜಿನ ಆವರಣದಲ್ಲಿರುವ ಮಸೀದಿಗೆ ಇದೀಗ ಎರಡು ಬೀಗಮುದ್ರೆ ಬಿದ್ದಿದೆ.
ಪ್ರತಿಭಟನಾನಿರತ ವಿದ್ಯಾರ್ಥಿಗಳು ಮಸೀದಿ ಗೇಟುಗಳಿಗೆ ಬೀಗ ಜಡಿದು ಕೀಲಿಕೈಯನ್ನು ಕಾಲೇಜು ಆಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಇದಕ್ಕೂ ಮುನ್ನ ಮಸೀದಿ ನಿರ್ವಹಣಾ ಸಮಿತಿ ಕೂಡಾ ಗೇಟುಗಳಿಗೆ ಬೀಗ ಜಡಿದಿತ್ತು.
ಎರಡನೇ ಬೀಗದ ಕೀಲಿಕೈಗಳು ಕಾಲೇಜಿನ ಭದ್ರತಾ ಸಿಬ್ಬಂದಿ ಬಳಿ ಇವೆ ಎಂದು ಪ್ರಾಚಾರ್ಯ ಡಿ.ಕೆ.ಸಿಂಗ್ ಹೇಳಿದ್ದಾರೆ. "ಆಡಳಿತ ವರ್ಗ ನಿರ್ಧರಿಸಿದರೆ ಮಸೀದಿ ತೆರೆಯಲಾಗುತ್ತದೆ. ನಮ್ಮ ಭದ್ರತಾ ಸಿಬ್ಬಂದಿ ಬಳಿ ಕೀಲಿಕೈಗಳಿದ್ದು, ಮಸೀದಿ ಆವರಣದಿಂದ ಕಳ್ಳತನವಾಗುತ್ತದೆ ಎಂಬ ಆರೋಪವನ್ನು ತಡೆಯಲು ಬೀಗ ಜಡಿಯಲಾಗಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
2018ರಲ್ಲಿ ಸುನ್ನಿ ವಕ್ಫ್ ಮಂಡಳಿ ಕಾಲೇಜಿಗೆ ನೋಟಿಸ್ ನೀಡಿದಾಗಿನಿಂದ ಕಾಲೇಜು ವಿವಾದದ ಕೇಂದ್ರವಾಗಿತ್ತು. ಈ ಮಸೀದಿ ಹಾಗೂ ಅದರ ಭೂಮಿ ವಕ್ಫ್ ಆಸ್ತಿ ಎಂದು ಹೇಳಿಕೊಂಡ ಮಂಡಳಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಪಸರಿಸಿತ್ತು. ಸಾಮಾನ್ಯವಾಗಿ ತೀರಾ ವಿರಳ ಸಂಖ್ಯೆಯ ಜನ ಇಲ್ಲಿ ಪ್ರಾರ್ಥನೆಗೆ ಆಗಮಿಸುತ್ತಾರಾದರೂ, ನವೆಂಬರ್ 29ರಂದು 500ಕ್ಕೂ ಹೆಚ್ಚು ಮಂದಿ ಮುಸ್ಲಿಮರು ಶುಕ್ರವಾರದ ಪ್ರಾರ್ಥನೆಗಾಗಿ ಒಟ್ಟು ಸೇರಿದ್ದರು. ಡಿಸೆಂಬರ್ 3ರಂದು ಕಾಲೇಜಿನ ವಿದ್ಯಾರ್ಥಿಗಳು ಮಸೀದಿಯಿಂದ 50 ಮೀಟರ್ ದೂರದಲ್ಲಿ ಹನುಮಾನ್ ಚಾಲೀಸ ಪಠಣ ಮಾಡಿದ್ದರು. ಮಸೀದಿಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರೆ, ನಾವು ಇದನ್ನು ಮುಂದುವರಿಸುವುದಾಗಿ ಹೇಳಿದ್ದರು.
ಪ್ರತಿಭಟನೆಯ ನಡುವೆ ಪೊಲೀಸರು ಪ್ರಾರ್ಥನೆ ತಡೆದಿದ್ದರು. ವಕ್ಫ್ ಮಂಡಳಿಯ ಪ್ರತಿಪಾದನೆಯನ್ನು 2018ರಲ್ಲಿ ನೋಟಿಸ್ ಬಂದ ಸಂದರ್ಭದಲ್ಲೇ ಕಾಲೇಜು ತಿರಸ್ಕರಿಸಿತ್ತು. ಮಂಡಳಿ ಕೂಡಾ ಈ ನೋಟಿಸ್ ವಾಪಾಸು ಪಡೆದಿರುವುದಾಗಿ ಸ್ಪಷ್ಟಪಡಿಸಿತ್ತು. ಆದರೆ ಡಿಸೆಂಬರ್ 3ರಂದು ನಮಾಜ್ ಸಲ್ಲಿಸಲು ಆಗಮಿಸಿದ್ದವರಿಗೆ ಕ್ಯಾಂಪಸ್ ಪ್ರವೇಶ ನಿಷೇಧಿಸಲಾಗಿತ್ತು.







