ಯುಎಪಿಎ ಪ್ರಕರಣ : ನ್ಯೂಸ್ ಕ್ಲಿಕ್ ನ ಅಮಿತ್ ಚಕ್ರವರ್ತಿಗೆ ಮಾಫಿ ಸಾಕ್ಷಿದಾರನಾಗಲು ದಿಲ್ಲಿ ಕೋರ್ಟ್ ಅನುಮತಿ
Photo: newsclick.com
ಹೊಸದಿಲ್ಲಿ : ಚೀನಾ ಪರ ಪ್ರಚಾರಕ್ಕಾಗಿ ಹಣವನ್ನು ಸ್ವೀಕರಿಸಿದ್ದ ಆರೋಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಸುದ್ದಿ ಜಾಲತಾಣ ನ್ಯೂಸ್ ಕ್ಲಿಕ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಫಿ ಸಾಕ್ಷದಾರನಾಗಲು ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರಿಗೆ ದಿಲ್ಲಿ ನ್ಯಾಯಾಲಯವು ಅನುಮತಿ ನೀಡಿದೆ.
ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಚಕ್ರವರ್ತಿ ಮಾಫಿ ಸಾಕ್ಷಿದಾರನಾಗಲು ನ್ಯಾಯಾಲಯದ ಅನುಮತಿಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಧೀಶೆ ಹರ್ದೀಪ್ ಕೌರ್ ಅವರು ಪುರಸ್ಕರಿಸಿದರು. ಇದು ನ್ಯೂಸ್ ಕ್ಲಿಕ್ ನ ಸ್ಥಾಪಕ ಮತ್ತು ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರ ಸಂಕಷ್ಟಗಳನ್ನು ಹೆಚ್ಚಿಸಲಿದೆ.
ಪ್ರಕರಣದ ಕುರಿತು ದಾಖಲೆ ರೂಪದಲ್ಲಿ ಮಾಹಿತಿಗಳು ತನ್ನ ಬಳಿಯಿದ್ದು, ಅವುಗಳನ್ನು ದಿಲ್ಲಿ ಪೋಲಿಸರಿಗೆ ಬಹಿರಂಗಗೊಳಿಸಲು ತಾನು ಸಿದ್ಧನಿದ್ದೇನೆ ಎಂದೂ ಚಕ್ರವರ್ತಿ ತಿಳಿಸಿದರು. ದಿಲ್ಲಿ ಪೋಲಿಸ್ ನ ವಿಶೇಷ ಘಟಕವು ಕಳೆದ ವರ್ಷದ ಅ.3 ರಂದು ಪುರಕಾಯಸ್ಥ ಮತ್ತು ಚಕ್ರವರ್ತಿ ಅವರನ್ನು ಬಂಧಿಸಿದ್ದು, ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.