ಉ.ಪ್ರದೇಶ: ಎಸಿ ಇಟ್ಟುಕೊಂಡು ಮಲಗಿದ ವೈದ್ಯ, ಚಳಿಗೆ ಅಸು ನೀಗಿದ ಎರಡು ನವಜಾತ ಶಿಶುಗಳು

ಸಾಂದರ್ಭಿಕ ಚಿತ್ರ | Photo: freepik.com
ಮುಝಫ್ಫರ್ ನಗರ: ಶಾಮ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ತೀವ್ರ ಚಳಿಯಿದ್ದ ಕೋಣೆಯಲ್ಲಿ ಇರಿಸಲಾಗಿದ್ದ ಎರಡು ನವಜಾತ ಶಿಶುಗಳು ಮೃತಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯ ಮಾಲಿಕ ಡಾ.ನೀತು ಶನಿವಾರ ರಾತ್ರಿಯಿಡೀ ಏರ್ ಕಂಡಿಷನರನ್ನು ಚಾಲೂ ಸ್ಥಿತಿಯಲ್ಲಿಟ್ಟು ನಿದ್ರಿಸಿದ್ದರು ಎಂದು ನವಜಾತ ಶಿಶುಗಳ ಕುಟುಂಬಗಳು ಆರೋಪಿಸಿವೆ. ಮರುದಿನ ಬೆಳಿಗ್ಗೆ ಶಿಶುಗಳು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದವು.
ಕುಟುಂಬಗಳ ದೂರುಗಳ ಮೇರೆಗೆ ಡಾ.ನೀತು ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಈ ನಡುವೆ ಆರೋಗ್ಯ ಇಲಾಖೆಯು ಘಟನೆಯ ಕುರಿತು ವಿಚಾರಣೆಗೆ ಆದೇಶಿಸಿದ್ದು,ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದೆ.
ಶನಿವಾರ ಕೈರಾನಾದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಿಸಿದ್ದ ಶಿಶುಗಳನ್ನು ಅದೇ ದಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು,ಚಿಕಿತ್ಸೆಗಾಗಿ ಫೋಟೊಥೆರಪಿ ಘಟಕದಲ್ಲಿ ಇರಿಸಲಾಗಿತ್ತು.





