ತಮಿಳುನಾಡಿನ ಪ್ರಾತಿನಿಧ್ಯವನ್ನು ರಕ್ಷಿಸಲು ಮಕ್ಕಳ ಜನನಕ್ಕೆ ಆದ್ಯತೆ ನೀಡಿ: ಉದಯನಿಧಿ ಸ್ಟಾಲಿನ್

ಉದಯನಿಧಿ ಸ್ಟಾಲಿನ್ | PC : PTI
ಚೆನ್ನೈ: ರಾಜ್ಯದಲ್ಲಿ ಜನನ ಪ್ರಮಾಣದಲ್ಲಿ ಕುಸಿತ ಮತ್ತು ಸಂಸದೀಯ ಸ್ಥಾನಗಳ ಹಂಚಿಕೆಯ ಮೇಲೆ ಅದರ ಸಂಭಾವ್ಯ ಪರಿಣಾಮದ ಕುರಿತು ಬುಧವಾರ ಇಲ್ಲಿ ಕಳವಳಗಳನ್ನು ವ್ಯಕ್ತಪಡಿಸಿದ ಡಿಎಂಕೆ ನಾಯಕ ಹಾಗೂ ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು, ಮಕ್ಕಳ ಜನನಕ್ಕೆ ಆದ್ಯತೆ ನೀಡುವಂತೆ ನವವಿವಾಹಿತರನ್ನು ಆಗ್ರಹಿಸಿದರು.
ಡಿಎಂಕೆ ವರಿಷ್ಠ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ 72 ನೇ ಜನ್ಮದಿನದ ಪ್ರಯುಕ್ತ ಪಕ್ಷವು ಇಲ್ಲಿ ಆಯೋಜಿಸಿದ್ದ 72 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉದಯನಿಧಿ, ‘2026ರ ಚುನಾವಣೆಗಳಲ್ಲಿ 200ಕ್ಕೂ ಅಧಿಕ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ನವವಿವಾಹಿತರು ಆದಷ್ಟು ಶೀಘ್ರ ಮಕ್ಕಳನ್ನು ಪಡೆಯುವ ಬಗ್ಗೆ ಕಾಳಜಿ ವಹಿಸಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ರಾಜ್ಯವು ಮೊದಲು ಜನನ ನಿಯಂತ್ರಣವನ್ನು ಜಾರಿಗೊಳಿಸಿತ್ತು ಮತ್ತು ಅದರಿಂದಾಗಿ ಈಗ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಕ್ಷೇತ್ರ ಪುನರ್ವಿಂಗಡಣೆ ನಡೆದರೆ ನಾವು ಎಂಟು ಸಂಸದೀಯ ಸ್ಥಾನಗಳನ್ನು ಕಳೆದುಕೊಳ್ಳಲಿದ್ದೇವೆ ಮತ್ತು ಉತ್ತರದ ರಾಜ್ಯಗಳು 100ಕ್ಕೂ ಅಧಿಕ ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಲಿವೆ ಎಂದು ಹೇಳಿದರು.
ತಮ್ಮ ಮಕ್ಕಳಿಗೆ ತಮಿಳು ಹೆಸರುಗಳನ್ನು ಇಡುವಂತೆ ಜನರನ್ನು ಆಗ್ರಹಿಸಿದ ಅವರು, ತಮಿಳು ಅನನ್ಯತೆಯ ಸಂರಕ್ಷಣೆಯ ಅಗತ್ಯಕ್ಕೆ ಒತ್ತು ನೀಡಿದರು.
ದಕ್ಷಿಣದ ರಾಜ್ಯಗಳ ಮೇಲೆ ಕ್ಷೇತ್ರ ಪುನರ್ವಿಂಗಡಣೆಯ ಪರಿಣಾಮಗಳ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ ಉದಯನಿಧಿಯವರ ಈ ಹೇಳಿಕೆ ಹೊರಬಿದ್ದಿದೆ. ಸಂಭವನೀಯ ಪ್ರಾತಿನಿಧ್ಯ ಅಸಮತೋಲನದ ಬಗ್ಗೆ ರಾಜಕೀಯ ನಾಯಕರು ಈಗಾಗಲೇ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.
ಈ ನಡುವೆ ತಮಿಳುನಾಡು ಅರಣ್ಯ ಸಚಿವ ಕೆ.ಪೊನ್ಮುಡಿ ಮತ್ತು ರಾಜ್ಯಸಭಾ ಸಂಸದ ಎಂ.ಎಂ.ಅಬ್ದುಲ್ಲಾ ಅವರು ಬೆಂಗಳೂರಿನಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಬಿಜೆಪಿ ಸರಕಾರದಿಂದ ಪ್ರಸ್ತಾವಿತ ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಅವರು ಮುಖ್ಯಮಂತ್ರಿ ಸ್ಟಾಲಿನ್ ಮಾ.22ರಂದು ಚೆನ್ನೈನಲ್ಲಿ ಆಯೋಜಿಸಿರುವ ದಕ್ಷಿಣ ಭಾರತ ರಾಜ್ಯಗಳ ಪ್ರತಿನಿಧಿಗಳ ಸಭೆಗೂ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಿದ್ದಾರೆ.