ಮಹಾರಾಷ್ಟ್ರ | ವಿಪಕ್ಷ ಮೈತ್ರಿಕೂಟದಲ್ಲಿ ಬಿಕ್ಕಟ್ಟು: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ವ್ಯಂಗ್ಯವಾಡಿದ ಉದ್ಧವ್ ಸೇನಾ ಬಣ

Photo Credit : NDTV
ಮುಂಬೈ: ಮಹಾರಾಷ್ಟ್ರದ ವಿಪಕ್ಷಗಳ ಮೈತ್ರಿಕೂಟದಲ್ಲಿ ಬಿಕ್ಕಟ್ಟು ತಲೆದೋರಿದ್ದು, “ಶಿವಸೇನೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನಡುವಿನ ಮೈತ್ರಿಯ ಬಗ್ಗೆ ಕಾಂಗ್ರೆಸ್ ಅಭಿಪ್ರಾಯವೇನು ಎಂಬುದು ನಮಗೆ ಮುಖ್ಯವಲ್ಲ” ಎಂದು ಶಿವಸೇನೆ (ಉದ್ಛವ್ ಬಣ) ಸಂಸದ ಸಂಜಯ್ ರಾವತ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮುನ್ನ, ಮೈತ್ರಿಕೂಟದ ಕುರಿತು ದಿಲ್ಲಿಯ ಹೈಕಮಾಂಡ್ ಅನ್ನು ಸಂಪರ್ಕಿಸದೆ ತಾನು ಸಮ್ಮತಿಯನ್ನು ವ್ಯಕ್ತಪಡಿಸುವುದಿಲ್ಲ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕ ಎಚ್ಚರಿಕೆಯ ನಿಲುವನ್ನು ಪ್ರಕಟಿಸಿತ್ತು.
ಈ ಹೇಳಿಕೆಯನ್ನು ಉಲ್ಲೇಖಿಸಿರುವ ಸಂಜಯ್ ರಾವತ್, “ಕಾಂಗ್ರೆಸ್ ತನ್ನ ವೈಯಕ್ತಿಕ ನಿರ್ಧಾರವನ್ನು ಏನೇ ಕೈಗೊಂಡರೂ, ಯಾರದೇ ಅನುಮತಿಗಾಗಿ ಶಿವಸೇನೆ (ಉದ್ಧವ್ ಬಣ) ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾಯುವುದಿಲ್ಲ” ಎಂದೂ ಘೋಷಿಸಿದ್ದಾರೆ.
“ಶಿವಸೇನೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ ಈಗಾಗಲೇ ಒಟ್ಟಿಗೆ ಬಂದಿವೆ. ಇದು ಜನರ ಬಯಕೆಯಾಗಿದೆ. ಇದಕ್ಕಾಗಿ ಯಾರದೇ ಆದೇಶ ಅಥವಾ ಅನುಮತಿಯ ಅಗತ್ಯವಿಲ್ಲ. ಈ ವಿಷಯದ ಕುರಿತು ಶರದ್ ಪವಾರ್ ಹಾಗೂ ಎಡಪಕ್ಷಗಳು ಒಮ್ಮತ ಹೊಂದಿವೆ” ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ನಡುವೆ, ಬಿಜೆಪಿಯನ್ನು ಎದುರಿಸಲು ಎಲ್ಲ ವಿರೋಧ ಪಕ್ಷಗಳೂ ಒಟ್ಟುಗೂಡಬೇಕು ಎಂದು ಶರದ್ ಪವಾರ್ ಸೂಚಿಸಿದ್ದಾರೆ. ಮುಂಬೈನಲ್ಲಿ ಆಯೋಜನೆಗೊಂಡಿದ್ದ ಪಕ್ಷದ ಸಭೆಯಲ್ಲಿ ಈ ಇಂಗಿತವನ್ನು ವ್ಯಕ್ತಪಡಿಸಿದ ಶರದ್ ಪವಾರ್, ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿಯ ವಿರುದ್ಧ ಒಗ್ಗಟ್ಟಾಗಿ ಸ್ಪರ್ಧಿಸಬೇಕು ಎಂದು ಕರೆ ನೀಡಿದ್ದಾರೆ.







