ಮುಂಬೈ ಮೇಯರ್ ಹುದ್ದೆಯಲ್ಲಿ ಮಹಿಳಾ ಮೀಸಲು: ಲಾಟರಿ ಪ್ರಕ್ರಿಯೆಗೆ ಉದ್ಧವ್ ಶಿವಸೇನೆ ಆಕ್ಷೇಪ

ಉದ್ಧವ್ ಠಾಕ್ರೆ | Photo Credit : PTI
ಮುಂಬೈ: ಮುಂಬೈ ಮೇಯರ್ ಹುದ್ದೆಯನ್ನು ‘ಸಾಮಾನ್ಯ ಮಹಿಳೆ’ ವರ್ಗಕ್ಕೆ ಮೀಸಲಿಡುವಂತೆ ನಡೆದ ಲಾಟರಿ ಆಯ್ಕೆ ಪ್ರಕ್ರಿಯೆಗೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಗುರುವಾರ ನಡೆದ ಲಾಟರಿ ಡ್ರಾ ವೇಳೆ ಪ್ರಕ್ರಿಯೆ ಹಾಗೂ ಫಲಿತಾಂಶ ಎರಡನ್ನೂ ಪ್ರಶ್ನಿಸಿದ ಪಕ್ಷದ ಸದಸ್ಯರು ಕೋಲಾಹಲ ಸೃಷ್ಟಿಸಿ ಸಭೆಯಿಂದ ಹೊರನಡೆದರು.
ಲಾಟರಿ ಆಯ್ಕೆಯ ಪ್ರಕಾರ, ಪುಣೆ, ಧುಲೆ, ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ), ನಾಂದೇಡ್, ನವಿ ಮುಂಬೈ, ಮಾಲೆಗಾಂವ್, ಮೀರಾ–ಭಯಾಂದರ್, ನಾಸಿಕ್ ಮತ್ತು ನಾಗ್ಪುರ ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಇದೇ ವೇಳೆ, ಲಾತೂರ್, ಜಲ್ನಾ ಮತ್ತು ಥಾಣೆ ಮಹಾನಗರ ಪಾಲಿಕೆಗಳನ್ನು ಪರಿಶಿಷ್ಟ ಜಾತಿ (ಎಸ್ಸಿ) ವರ್ಗಕ್ಕೆ ಮೀಸಲಿಡಲಾಗಿದ್ದು, ಲಾತೂರ್ ಹಾಗೂ ಜಲ್ನಾ ಎಸ್ಸಿ ಮಹಿಳೆಯರಿಗೆ ಮೀಸಲಾಗಿವೆ. ಥಾಣೆ ಮಹಾನಗರ ಪಾಲಿಕೆ ಎಸ್ಸಿ ವರ್ಗದೊಳಗೆ ಮುಕ್ತವಾಗಿರಲಿದೆ.
ಇತರ ಹಿಂದುಳಿದ ವರ್ಗ (ಒಬಿಸಿ) ವಿಭಾಗದಲ್ಲಿ ಎಂಟು ಮಹಾನಗರ ಪಾಲಿಕೆಗಳನ್ನು ಮೀಸಲಿಡಲಾಗಿದೆ. ಅಕೋಲಾ, ಚಂದ್ರಾಪುರ, ಅಹಲ್ಯಾನಗರ ಮತ್ತು ಜಲಗಾಂವ್ಗಳನ್ನು ಒಬಿಸಿ ಮಹಿಳೆಯರಿಗೆ ಮೀಸಲಿಸಲಾಗಿದ್ದು, ಪನ್ವೇಲ್, ಕೊಲ್ಹಾಪುರ ಮತ್ತು ಉಲ್ಲಾಸ್ನಗರಗಳನ್ನು ಒಬಿಸಿ ಅಭ್ಯರ್ಥಿಗಳಿಗೆ ಮುಕ್ತವಾಗಿಡಲಾಗಿದೆ.
ಮುಂಬೈ ಮೇಯರ್ ಹುದ್ದೆಯ ಮೀಸಲಾತಿಯನ್ನು ಪ್ರಶ್ನಿಸಿದ ಉದ್ಧವ್ ಸೇನಾ ನಾಯಕಿ ಹಾಗೂ ಮುಂಬೈನ ಮಾಜಿ ಮೇಯರ್ ಕಿಶೋರಿ ಪೆಡ್ನೇಕರ್, “ಬಿಎಂಸಿಯನ್ನು ಒಬಿಸಿ ವರ್ಗದ ಅಡಿಯಲ್ಲಿ ಏಕೆ ಸೇರಿಸಲಾಗಿಲ್ಲ? ಹಿಂದಿನ ಎರಡು ಅವಧಿಗಳಲ್ಲಿ ಈ ಹುದ್ದೆ ಮುಕ್ತವಾಗಿಯೇ ಇತ್ತು” ಎಂದು ಹೇಳಿದರು.
ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸಚಿವರೊಬ್ಬರು, ವಿಷಯವನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದ್ದು, ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದರ ನಡುವೆ, ಬುಧವಾರ ನಡೆದ ಬಿಎಂಸಿ ಸಾಮಾನ್ಯ ಸಭೆಯಲ್ಲಿ 2019ರಿಂದ 2022ರವರೆಗೆ ಮುಂಬೈ ಮೇಯರ್ ಆಗಿದ್ದ ಪೆಡ್ನೇಕರ್ ಅವರನ್ನು ಉದ್ಧವ್ ಸೇನೆ ಪಕ್ಷದ ನಾಯಕರಾಗಿ ನೇಮಿಸಿದೆ.
ಲಾಟರಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೆಡ್ನೇಕರ್, “ಮುಂಬೈನಲ್ಲಿ ಒಬಿಸಿ ಸಮುದಾಯ ವಾಸಿಸುವ ಅನೇಕ ಪ್ರದೇಶಗಳಿವೆ. ಆದರೆ ಅವರ ಪ್ರತಿನಿಧಿಗಳ ಹೆಸರಿನ ಚಿಟ್ಗಳನ್ನು ಲಾಟರಿಯಲ್ಲಿ ಸೇರಿಸಲಾಗಿಲ್ಲ. ಇದು ತಪ್ಪು. ನಾವು ಇದನ್ನು ಖಂಡಿಸುತ್ತೇವೆ” ಎಂದು ತಿಳಿಸಿದರು.
ಇತ್ತೀಚೆಗೆ ನಡೆದ ಬಿಎಂಸಿ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾದ ಬಿಎಂಸಿಯಲ್ಲಿ ಠಾಕ್ರೆ ಕುಟುಂಬದ ಸುಮಾರು ಮೂರು ದಶಕಗಳ ಪ್ರಾಬಲ್ಯಕ್ಕೆ ತೆರೆ ಎಳೆದಿದೆ. ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಹಾಗೂ ಶಿಂಧೆ ನೇತೃತ್ವದ ಸೇನೆ 29 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿದೆ.
ಆದರೆ, ಸಂಖ್ಯಾಬಲ ಇದ್ದರೂ ಮುಂಬೈ ಮೇಯರ್ ಹುದ್ದೆ ಹಂಚಿಕೆ ವಿಚಾರದಲ್ಲಿ ಆಡಳಿತ ಮೈತ್ರಿಕೂಟದೊಳಗೆ ಆಂತರಿಕ ಭಿನ್ನಮತ ತೀವ್ರಗೊಂಡಿದೆ. ಬಿಜೆಪಿ ಅಧಿಕಾರ ಹಂಚಿಕೆ ಕುರಿತು ಒತ್ತಡ ಹೇರುತ್ತಿದ್ದರೆ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಮೈತ್ರಿಕೂಟದ ಏಕತೆ ಕಾಪಾಡುವ ಪ್ರಯತ್ನದಲ್ಲಿದ್ದಾರೆ.







