ಬಿಜೆಪಿ ಭಾಷೆಯ ಆಧಾರದಲ್ಲಿ ಜನರನ್ನು ವಿಭಜಿಸಲು ಯತ್ನಿಸುತಿದೆ: ಉದ್ಧವ್ ಠಾಕ್ರೆ

ಉದ್ಧವ್ ಠಾಕ್ರೆ | PC : PTI
ಮುಂಬೈ: ಬಿಜೆಪಿ ಭಾಷೆಯ ಆಧಾರದಲ್ಲಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಶಿವ ಸೇನಾ (ಯುಬಿಟಿ) ವರಿಷ್ಠ ಉದ್ಧವ್ ಠಾಕ್ರೆ ಗುರುವಾರ ಆರೋಪಿಸಿದ್ದಾರೆ.
ಆಡಳಿತಾರೂಢ ಪಕ್ಷ ಮಹಾರಾಷ್ಟ್ರದಲ್ಲಿ ‘‘ಭಾಷಾ ತುರ್ತು ಪರಿಸ್ಥಿತಿ’’ ಹೇರುತ್ತಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ದವ್ ಠಾಕ್ರೆ, ತನ್ನ ಪಕ್ಷ ಹಿಂದಿಯನ್ನು ವಿರೋಧಿಸುತ್ತಿಲ್ಲ. ಆದರೆ, ಮರಾಠಿ ಮಾತನಾಡುವವರೇ ಹೆಚ್ಚಾಗಿರುವ ಮಹಾರಾಷ್ಟ್ರದಲ್ಲಿ ಭಾಷಾ ಹೇರಿಕೆಯನ್ನು ಖಂಡಿತವಾಗಿಯೂ ವಿರೋಧಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
‘‘ನಾವು ಯಾವುದೇ ಭಾಷೆಯನ್ನು ದ್ವೇಷಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ. ಅಂದರೆ, ಇದರ ಅರ್ಥ ನಾವು ಯಾವುದೇ ಭಾಷೆಯ ಹೇರಿಕೆಗೆ ಅವಕಾಶ ನೀಡುತ್ತೇವೆ ಎಂದಲ್ಲ’’ ಎಂದು ಅವರು ಹೇಳಿದ್ದಾರೆ.
ಮರಾಠಿ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಹಿಂದಿ ಬೋಧನೆ ಕುರಿತ ವಿವಾದದ ನಡುವೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದಿ ಹೇರಿಕೆ ಬಿಜೆಪಿಯ ಗುಪ್ತ ಕಾರ್ಯಸೂಚಿ. ಆಡಳಿತಾರೂಢ ಪಕ್ಷ ಭಾಷಾ ತುರ್ತು ಪರಿಸ್ಥಿತಿ ಹೇರುತ್ತಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.







