ಇವಿಎಂನಿಂದ ಚುನಾವಣೆ ಗೆದ್ದುಕೊಡುವ ಆಫರ್ ಉದ್ಧವ್ ಠಾಕ್ರೆಗೂ ಬಂದಿತ್ತು : ಸಂಜಯ್ ರಾವತ್

Image Source : PTI
ಹೊಸದಿಲ್ಲಿ,ಆ.10: ಕಳೆದ ವರ್ಷದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ಮೈತ್ರಿಕೂಟ ಮಹಾರಾಷ್ಟ್ರ ವಿಕಾಸ್ ಅಗಾಡಿ (ಎಂವಿಎ )ಗೆ ‘ಇವಿಎಂ ಮೂಲಕ’ 160 ಸ್ಥಾನಗಳನ್ನು ಗೆಲ್ಲಿಸಿಕೊಡುವ ಕೊಡುಗೆಯನ್ನು ಇಬ್ಬರು ವ್ಯಕ್ತಿಗಳು ತನಗೆ ಆಫರ್ ನೀಡಿದ್ದರೆಂದು ಶರದ್ ಪವಾರ್ ನೀಡಿದ್ದ ಹೇಳಿಕೆಗೆ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ರವಿವಾರ ಧ್ವನಿಗೂಡಿಸಿದ್ದಾರೆ.
ಶರದ್ ಪವಾರ್ ಉಲ್ಲೇಖಿಸಿರುವ ಆ ಇಬ್ಬರು ಅನಾಮಧೇಯ ವ್ಯಕ್ತಿಗಳು ಉದ್ಧವ್ ಠಾಕ್ರೆ ಅವರನ್ನು ಕೂಡಾ ಎರಡು ಸಲ ಭೇಟಿಯಾಗಿದ್ದರು ಎಂದವರು ತಿಳಿಸಿದ್ದಾರೆ. 2024ರ ಲೋಕಸಭಾ ಚುನಾವಣೆ ಸಂದರ್ಭ ಹಾಗೂ ಆನಂತರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಚೆ ಅವರು ಉದ್ಧವ್ರನ್ನು ಭೇಟಿಯಾಗಿದ್ದರು ಎಂದು ರಾವತ್ ಬಹಿರಂಗಪಡಿಸಿದ್ದಾರೆ.
‘‘ ಶರದ್ ಪವಾರ್ ಅವರನ್ನು ಭೇಟಿಯಾಗಿದ್ದ ಆ ವ್ಯಕ್ತಿಗಳು ಲೋಕಸಭಾ ಚುನಾವಣೆ ಸಂದರ್ಭ ಉದ್ಧವ್ ಠಾಕ್ರೆ ಅವರನ್ನೂ ಭೇಟಿಯಾಗಿದ್ದರು. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟವರು ಹಾಗೂ ದೇಶದಲ್ಲಿನ ಹಾಲಿ ವಾತಾವರಣವನ್ನು ಕಂಡಾಗ ಲೋಕಸಭಾ ಚುನಾವಣೆಯಲ್ಲಿ ಖಂಡಿತವಾಗಿಯೂ ಗೆಲ್ಲುತ್ತೇವೆ ಎಂದು ನಾವು ಅವರಿಗೆ ತಿಳಿಸಿದ್ದೆವು’’ ಎಂದು ರಾವತ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘‘ ಲೋಕಸಭಾ ಚುನಾವಣೆಯ ಬಳಿಕ ಅವರು ನಮ್ಮನ್ನು ಮತ್ತೆ ಭೇಟಿಯಾಗಿದ್ದರು. ಆದರೆ ನಾವು ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳು ಅಪಾರ ಯಶಸ್ಸನ್ನು ಕಂಡಿವೆ. ವಿಧಾನಸಭಾ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರಲಿದ್ದೇವೆ ಎಂದು ಹೇಳಿದೆವು. ಆಗ ಅವರು ನಮಗೆ ಗೆಲ್ಲಲು ಕಠಿಣವಾದಂತಹ 60-65 ಸ್ಥಾನಗಳನ್ನು ಗೆಲ್ಲಿಸಿಕೊಡುವ ಕೊಡುಗೆ ನೀಡಿದರು ಮತ್ತು ಇವಿಎಂಗಳ ಮೂಲಕ ಜಯ ತಂದುಕೊಡುವ ಭರವಸೆ ನೀಡಿದ್ದರು. ಆಗ ಠಾಕ್ರೆ ಅವರು ಅದನ್ನು ಮಾಡಬೇಕಾದ ಅಗತ್ಯ ನಮಗಿಲ್ಲವೆಂದು ಅವರಿಗೆ ಹೇಳಿದ್ದರೆಂದು ರಾವತ್ ತಿಳಿಸಿದರು. ಈ ಸಂದರ್ಭ ಆ ವ್ಯಕ್ತಿಗಳು ನಮಗೆ, ಅಧಿಕಾರದಲ್ಲಿರುವವರು ( ಬಿಜೆಪಿ ನೇತೃತ್ವದ ಮಹಾಯುತಿ),ಇವಿಎಂಗಳು ಹಾಗೂ ಮತದಾರಪಟ್ಟಿಯ ಮೂಲಕ ಗೆಲುವು ಸಾಧಿಸುವ ‘ಯೋಜನೆ’ಯನ್ನು ರೂಪಿಸಿದ್ದಾರೆ ಎಂದು ಹೇಳಿದ್ದನ್ನು ರಾವುತ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
2024ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಪಕ್ಷಗಳ ಪೈಕಿ ಬಿಜೆಪಿ 132, ಶಿವಸೇನಾ (ಶಿಂಧೆ ಬಣ) 57, ಎನ್ಸಿಪಿ (ಅಜಿತ್ ಪವಾರ್) 41 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಪ್ರತಿಪಕ್ಷ ಮೈತ್ರಿಕೂಟ ಮಹಾವಿಕಾಸ್ ಅಗಾಡಿ ಕೇವಲ 46 ಸ್ಥಾನಗಳಲ್ಲಿ (ಶಿವಸೇನಾ(ಯುಬಿಟಿ) -20, ಕಾಂಗ್ರೆಸ್- 16 ಹಾಗೂ ಎನ್ಸಿಪಿ (ಶರದ್ಪವಾರ್) -10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.







