ನಾನು ಶನಿವಾರವಷ್ಟೆ ಹೊರಗೆ ಕಾಲಿಡುವ ರಾಜಕಾರಣಿಯಲ್ಲ: ನಟ ವಿಜಯ್ ರನ್ನು ಛೇಡಿಸಿದ ಉದಯನಿಧಿ ಸ್ಟಾಲಿನ್

ಉದಯನಿಧಿ ಸ್ಟಾಲಿನ್ / ವಿಜಯ್ (Photo: PTI)
ಚೆನ್ನೈ: ನಾನು ಶನಿವಾರವಷ್ಟೆ ಹೊರಗೆ ಕಾಲಿಡುವ ರಾಜಕಾರಣಿಯಲ್ಲ ಎಂದು ನಟ, ರಾಜಕಾರಣಿ ವಿಜಯ್ ರನ್ನು ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಛೇಡಿಸಿದ್ದಾರೆ. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಕಾರ್ಯಕರ್ತರಿಗೆ ಯಾವುದೇ ಸೈದ್ಧಾಂತಿಕ ಸ್ಪಷ್ಟತೆ ಇಲ್ಲ ಎಂದೂ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಡಿಎಂಕೆ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಉದಯನಿಧಿ, ನೇರವಾಗಿ ಕಾಂಗ್ರೆಸ್ ಪಕ್ಷದ ಹೆಸರನ್ನು ಉಲ್ಲೇಖಿಸದೆ, ನಮ್ಮ ಪ್ರಮುಖ ಮಿತ್ರ ಪಕ್ಷವು ಸದಾ ನಮ್ಮ ಜೊತೆಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಾರದಲ್ಲಿ ನಾಲ್ಕೈದು ದಿನ ಪ್ರವಾಸ ನಡೆಸುವುದಾಗಿ ಹೇಳಿರುವ ಉದಯನಿಧಿ, ರವಿವಾರವೂ ಅಧಿಕೃತ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತೇನೆ ಎಂದು ತಿಳಿಸಿದ್ದಾರೆ.
“ನಾನು ಶನಿವಾರ ಮಾತ್ರ ಹೊರಗೆ ಬರುವುದಿಲ್ಲ” ಎಂದು ನಟ ವಿಜಯ್ ರನ್ನುದ್ದೇಶಿಸಿ ವ್ಯಂಗ್ಯವಾಡಿದ ಉದಯನಿಧಿ, ನನ್ನ ಕೆಲಸಗಳನ್ನು ಮಾಡಲು, ಜಿಲ್ಲಾ ಪ್ರವಾಸ ಕೈಗೊಳ್ಳಲು ವಾರಗಳನ್ನು ನೋಡುವುದಿಲ್ಲ ಎಂದು ಕಿಚಾಯಿಸಿದ್ದಾರೆ.
2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 13ರಿಂದ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿರುವ ಟಿವಿಕೆ ಮುಖ್ಯಸ್ಥ ವಿಜಯ್, ಶನಿವಾರಗಳಂದು ಮಾತ್ರ ಅಭಿಯಾನಗಳಲ್ಲಿ ಪಾಲ್ಗೊಂಡಿದ್ದಾರೆ.
ಕೆಲಸದ ದಿನಗಳಲ್ಲಿ ಜನರಿಗೆ ತೊಂದರೆಯಾಗದಂತೆ ಶನಿವಾರ ಮಾತ್ರ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದ್ದ ವಿಜಯ್, ಮುಂಬರುವ ದಿನಗಳಲ್ಲಿ ತಮ್ಮ ಪ್ರಚಾರ ಪಟ್ಟಿಗೆ ರವಿವಾರವನ್ನೂ ಸೇರ್ಪಡೆ ಮಾಡಿಕೊಳ್ಳುವುದಾಗಿ ಹೇಳಿದ್ದರು.







