ಇಂಫಾಲ ವಿಮಾನ ನಿಲ್ದಾಣದ ಬಳಿ ಕಂಡ ಯುಎಫ್ಒ: ಎರಡು ವಿಮಾನಗಳ ಮಾರ್ಗ ಬದಲು, ಮೂರು ವಿಳಂಬ
ಸಾಂದರ್ಭಿಕ ಚಿತ್ರ
ಇಂಫಾಲ/ಹೊಸದಿಲ್ಲಿ: ರನ್ ವೇ ಸಮೀಪ ಅಪರಿಚಿತ ಹಾರಾಡುವ ವಸ್ತು (ಯುಎಫ್ಒ) ಕಾಣಿಸಿಕೊಂಡಿದ್ದನ್ನು ವಾಯು ಸಂಚಾರ ನಿಯಂತ್ರಕರು ವರದಿ ಮಾಡಿದ ಬಳಿಕ ರವಿವಾರ ಇಂಫಾಲ ವಿಮಾನ ನಿಲ್ದಾಣದಲ್ಲಿ ಮೂರು ವಿಮಾನಗಳು ಮೂರು ಗಂಟೆಗೂ ಅಧಿಕ ಸಮಯ ಟರ್ಮ್ಯಾಕ್ ನಲ್ಲಿಯೇ ಬಾಕಿಯಾಗಿದ್ದವು ಮತ್ತು ಒಳಬರುತ್ತಿದ್ದ ಎರಡು ವಿಮಾನಗಳನ್ನು ಕೋಲ್ಕತಾಕ್ಕೆ ತಿರುಗಿಸಲಾಗಿತ್ತು.
ವಿಮಾನ ನಿಲ್ದಾಣದ ಅಧಿಕಾರಿಗಳು ತಕ್ಷಣವೇ ನಿಯಂತ್ರಿತ ವಾಯುಪ್ರದೇಶವನ್ನು ಮುಚ್ಚಿದ್ದರು ಮತ್ತು ಎಲ್ಲ ಯಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದರು.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ನಿಯಂತ್ರಿತ ವಾಯು ಪ್ರದೇಶವನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಿತ್ತು. ಪರಿಶೀಲನೆಯ ಬಳಿಕ ವಾಯುಪಡೆಯು ವಾಣಿಜ್ಯಿಕ ಯಾನಗಳಿಗಾಗಿ ವಾಯುಪ್ರದೇಶದ ಮರುಸ್ಥಾಪನೆಗೆ ಹಸಿರು ನಿಶಾನೆಯನ್ನು ನೀಡಿತು.
ಇಂಫಾಲ ವಿಮಾನ ನಿಲ್ದಾಣದ ನಿರ್ದೇಶಕ ಚಿಪೆಮಿ ಕೀಷಿಂಗ್ ಅವರು ಡ್ರೋನ್ಗಳು ಕಂಡು ಬಂದಿದ್ದನ್ನು ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ. ಸಕ್ಷಮ ಪ್ರಾಧಿಕಾರವು ಭದ್ರತಾ ಅನುಮತಿಯನ್ನು ನೀಡಿದ ಬಳಿಕ ಎಲ್ಲ ಮೂರು ಯಾನಗಳು ಕಾರ್ಯಾಚರಿಸಿತು ಎಂದು ಅವರು ತಿಳಿಸಿದರು.
‘ಸಾಕಷ್ಟು ದೊಡ್ಡದಾದ ವಸ್ತು’ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಹಾರಾಡುತ್ತಿದ್ದುದು ಕಂಡು ಬಂದಿತ್ತು ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.