‘ನ್ಯಾಯ ಸಮಿತಿ’ ರಚಿಸುವಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ UGC ನಿರ್ದೇಶನ

ಯುಜಿಸಿ | Photo Credit : PTI
ಹೊಸದಿಲ್ಲಿ, ಜ. 14: ಶಿಕ್ಷಣ ಸಂಸ್ಥೆಗಳಲ್ಲಿ ತಾರತಮ್ಯವನ್ನು ಹೋಗಲಾಡಿಸುವ ಉದ್ದೇಶದಿಂದ ರೂಪಿಸಲಾಗಿರುವ ತನ್ನ ನೂತನ ನಿಯಮಾವಳಿಗಳಿಗೆ ಅನುಗುಣವಾಗಿ, ‘ನ್ಯಾಯ ಸಮಿತಿ’ಗಳನ್ನು ಸ್ಥಾಪಿಸುವಂತೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ತಾರತಮ್ಯಕ್ಕೆ ಸಂಬಂಧಿಸಿದ ದೂರುಗಳನ್ನು ನಿಭಾಯಿಸಲು ಮತ್ತು ಸರ್ವರ ಒಳಗೊಳ್ಳುವಿಕೆಯನ್ನು ಖಾತರಿಪಡಿಸಲು ಸಮಾನ ಅವಕಾಶ ಕೇಂದ್ರ ಹಾಗೂ ನ್ಯಾಯ ಸಮಿತಿಯನ್ನು ಸ್ಥಾಪಿಸುವಂತೆ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳಿಗೆ ಯುಜಿಸಿಯು ಮಂಗಳವಾರ ಸೂಚಿಸಿದೆ. ನೂತನ ನಿಯಮಗಳನ್ನು ಒಳಗೊಂಡ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನ್ಯಾಯ ಕಾಪಾಡಲು ನಿಯಮಾವಳಿಗಳು, 2026’ನ್ನು ಅದು ಪ್ರಕಟಿಸಿದೆ.
ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಮತ್ತು ಅಂಗವೈಕಲ್ಯ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು ಹಾಗೂ ಉನ್ನತ ಶಿಕ್ಷಣದಲ್ಲಿ ‘ಸಂಪೂರ್ಣ ನ್ಯಾಯ ಮತ್ತು ಸರ್ವರ ಒಳಗೊಳ್ಳುವಿಕೆಯನ್ನು ಖಾತರಿಪಡಿಸಲು’ ಈ ನೂತನ ನಿಯಮಾವಳಿಗಳನ್ನು ರೂಪಿಸಲಾಗಿದೆ.
ನಿಯಮಾವಳಿಗಳ ಪ್ರಕಾರ, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ನ್ಯಾಯ ಸಮಿತಿಯನ್ನು ರಚಿಸಬೇಕು. ದೂರುಗಳನ್ನು ವಿಚಾರಿಸುವುದು, ಪರಿಹಾರ ಕ್ರಮಗಳನ್ನು ಶಿಫಾರಸು ಮಾಡುವುದು ಹಾಗೂ ದೂರುದಾರರನ್ನು ಪ್ರತೀಕಾರದ ಕ್ರಮಗಳಿಂದ ರಕ್ಷಿಸುವುದು ನ್ಯಾಯ ಸಮಿತಿಯ ಹೊಣೆಗಾರಿಕೆಯಾಗಿದೆ.
ಉನ್ನತ ಶಿಕ್ಷಣ ಸಂಸ್ಥೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ‘ನ್ಯಾಯ ಸಹಾಯವಾಣಿ’ಯನ್ನು ನಡೆಸಬೇಕು. ಜೊತೆಗೆ, ತಾರತಮ್ಯ ಸಂಬಂಧಿ ಘಟನೆಗಳನ್ನು ವರದಿ ಮಾಡಲು ಆನ್ಲೈನ್ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂಬುದಾಗಿಯೂ ಯುಜಿಸಿ ನಿಯಮಾವಳಿಗಳು ಹೇಳುತ್ತವೆ.
ನ್ಯಾಯ ಸಮಿತಿಯ ಮುಖ್ಯಸ್ಥರು ಸಂಸ್ಥೆಯ ಮುಖ್ಯಸ್ಥರೇ ಆಗಿರುತ್ತಾರೆ. ಸಮಿತಿಯಲ್ಲಿ ಹಿರಿಯ ಬೋಧಕ ಸಿಬ್ಬಂದಿ, ಓರ್ವ ಬೋಧಕೇತರ ಸಿಬ್ಬಂದಿ, ನಾಗರಿಕ ಸಮಾಜದ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಇರಬೇಕು. ಸಮಾನ ಅವಕಾಶ ಕೇಂದ್ರದ ಸಮನ್ವಯಾಧಿಕಾರಿಯು ನ್ಯಾಯ ಸಮಿತಿಯ ಸದಸ್ಯ-ಕಾರ್ಯದರ್ಶಿಯಾಗಿರುತ್ತಾರೆ. ಸಮಿತಿಯಲ್ಲಿ ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಅಂಗವೈಕಲ್ಯ ಹೊಂದಿರುವವರು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ಇರಬೇಕು.







