ಭಾರತದ ರಕ್ಷಣಾ ಬತ್ತಳಿಕೆಗೆ ಹೊಸ ಅಸ್ತ್ರ| ಯುಎಲ್ಪಿಜಿಎಂ-ವಿ3 ಕ್ಷಿಪಣಿ ಯಶಸ್ವಿ ಪರೀಕ್ಷೆ

PC : @ProDefKolkata
ಹೊಸದಿಲ್ಲಿ,ಜು.25: ಭಾರತವು ಶುಕ್ರವಾರ ಯಶಸ್ವಿಯಾಗಿ ಡ್ರೋನ್ನಿಂದ ಉಡಾವಣೆಗೊಳಿಸುವ ಯು ಎಲ್ ಪಿ ಜಿಎಂ-ವಿ3 ಕ್ಷಿಪಣಿ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಆಂಧ್ರಪ್ರದೇಶದ ಕರ್ನೂಲ್ ನಲ್ಲಿರುವ ರಾಷ್ಟೀಯ ಮುಕ್ತ ಪ್ರದೇಶ ವಲಯ (ಎನ್ಓಎಆರ್)ದ ಪರೀಕ್ಷಾ ವ್ಯಾಪ್ತಿಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಯಿತು. ಇದರೊಂದಿಗೆ ಭಾರತದ ರಕ್ಷಣಾ ಬತ್ತಳಿಕೆಗೆ ಇನ್ನೊಂದು ಅಸ್ತ್ರ ಸೇರ್ಪಡೆಗೊಂಡಂತಾಗಿದೆ.
ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ವಿಜ್ಞಾನಿಗಳ ತಂಡವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಭಿನಂದಿಸಿದರು. ನಿರ್ಣಾಯಕವಾದ ರಕ್ಷಣಾ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಹಾಗೂ ತಯಾರಿಸಲು ಭಾರತವು ಈಗ ಸನ್ನದ್ಧವಾಗಿದೆಯೆಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘‘ಯುಎಲ್ಪಿಜಿಎಂ-3 ಕ್ಷಿಪಣಿ ವ್ಯವಸ್ಥೆಯ ಅಭಿವೃದ್ಧಿ ಹಾಗೂ ಯಶಸ್ವಿ ಪ್ರಾಯೋಗಿಕ ಪರೀಕ್ಷೆಗಾಗಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ ಮತ್ತು ಕೈಗಾರಿಕಾ ಪಾಲುದಾರರು,ಮಧ್ಯಮ, ಕಿರು ಹಾಗೂ ಸೂಕ್ಷ್ಮ ಕೈಗಾರಿಕೆಗಳು ಮತ್ತು ಸ್ಟಾರ್ಟ್ಅಪ್ಗಳನ್ನು ಅವರು ಅಭಿನಂದಿಸಿದ್ದಾರೆ. ಈ ಯಶಸ್ಸು ಭಾರತೀಯ ಉದ್ಯಮವು ನಿರ್ಣಾಯಕವಾದ ರಕ್ಷಣಾ ತಂತ್ರಜ್ಞಾನಗಳನ್ನು ಅಳವಡಿಸಲು ಹಾಗೂ ಉತ್ಪಾದಿಸಲು ಸಿದ್ಧವಾಗಿದೆ ಎಂಬುದನ್ನು ತೋರಿಸುತ್ತದೆ ’’ ಎಂದು ಸಿಂಗ್ ಹೇಳಿದರು.
ಯು ಎಲ್ ಪಿ ಜಿ ಎಂ-ವಿ3 ಕ್ಷಿಪಣಿ ಉಡಾವಣಾ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ 2025ರ ಫೆಬ್ರವರಿ 10ರಿಂದ 14ರವರೆಗೆ ಏರ್ಪಡಿಸಲಾಗಿದ್ದ ಏರೋ ಇಂಡಿಯಾ ಶೋ ನಲ್ಲಿ ಪ್ರದರ್ಶಿಸಲಾಗಿತ್ತು.







